ಎಲ್ಲಾ ಊರಲ್ಲೂ "ವಿದ್ಯಾರಣ್ಯಪುರ" ಅಂತ ಗಲ್ಲಿ ಇರತ್ತೆ, ಆದ್ರೆ ಮೈಸೂರಲ್ಲಿರೋ ವಿದ್ಯಾರಣ್ಯಪುರ ನನ್ನ ಮಟ್ಟಿಗೆ ಒಂಥರಾ ಸ್ಪೆಷಲ್. ನಾನು ಕಾಲೇಜ್ ಓದುವಾಗ ನಾಲ್ಕು ವರ್ಷ ಅಲ್ಲೇ ಇದ್ದೆ. ವಿದ್ಯಾರಣ್ಯಪುರಕ್ಕೆ ಒಂದು ಐತಿಹಾಸಿಕ ಖದರ್ರು ಬಂದಿದ್ದು ನಾಲ್ಕನೇ ಮೇನ್, ನಾಲ್ಕನೇ ಕ್ರಾಸಲ್ಲಿ ಇರೋ "ಅಪೋಲೊ ಜಿಮ್"ನಿಂದ ಅನ್ನಬಹುದು. ಒಂಥರಾ ಗರಡಿಮನೆ ಇದ್ದಂಗೆ ಇದ್ದ ಆ ಜಿಮ್ ಈಗಿನ ಕಾಲದ ಜಿಮ್‍ಗಳಂತೆ ಮಲ್ಟಿಜಿಮ್ ಆಗಿರಲಿಲ್ಲ. ಅದೇ ರೋಡಲ್ಲಿ ಇದ್ದ, ಚಿಲುಮೆಯ ಉದ್ಯಾನವನದ ಒಂದು ಮೂಲೆಯಲ್ಲಿ ಕಾರ್ನರ್ ಸೈಟಲ್ಲಿ ಹಳೇ ಮನೆಗೆ ತಗಡಿನ ಬೋರ್‍ಡ್ ತೂಗಿ ಅದರ ಮೇಲೆ "ಅಪೊಲೊ ಜಿಮ್" ಅಂತ ಬರೆದಿದ್ದರು. ಜಿಮ್ಮು ಹಳೇದಿರಬಹುದು ಆದ್ರೆ ಅದು ಮುದುಕರ ಜಿಮ್ ಅಂತೂ ಆಗಿರಲಿಲ್ಲ. ತಿಂಗಳಿನ ಸದಸ್ಯತ್ವಕ್ಕೆ ಬರೀ ಇಪ್ಪತ್ತು ರುಪಾಯಿ, ಊರಿಂದ ಅಪ್ಪ ಕಳಿಸಿದ ದುಡ್ಡಲ್ಲಿ ಈ ಜಿಮ್ಮಿಗೆ ಬರೋಕಂತು ಕಷ್ಟ ಆಗ್ತಿರಲಿಲ್ಲ. ಹತ್ರದ ಮಾಧ್ವ ಹಾಸ್ಟೆಲು, ಸಂಕೇತಿ ಹಾಸ್ಟೆಲು ಹುಡುಗರಲ್ಲದೇ, ಚಾಮುಂಡಿಪುರಮ್, ಜೆ ಪಿ ನಗರದ ಹುಡುಗರೂ ಬರ್ತಾ ಇದ್ರು. ಎಲ್ಲಾ ಚಿಗುರು ಮೀಸೆ ಹುಡುಗ್ರೆ. ಅಷ್ಟೇ ಅಲ್ಲ, ಜಾತಿ ಪಾಡೂ ಈ ಜಿಮ್ಮಿಗೆ ಇರಲಿಲ್ಲ, ಜನಿವಾರದೋರು, ನಾಮದೋರು, ಎಲ್ಲಾ ಜಾತಿ ಹುಡುಗ್ರು ಬರ್ತಾ ಇದ್ರು.
ಜೀರ್ಣಾವಸ್ಥೆಯಲ್ಲಿದ್ದ ಬಾಗಿಲು ದಾಟಿ ಒಳಗೆ ಕಾಲಿಟ್ಟರೆ, ಒಂದು ದೊಡ್ಡ ಹಾಲ್. ಅಲ್ಲಿ ಗೋಡೆಗೆ ಆನಿಸಿದಂತೆ ಸುತ್ತಲೂ ಶೆಲ್ಫ್ ಇಟ್ಟಿದ್ದರು. ಶೆಲ್ಫ್ ತುಂಬಾ ಏರಿಕೆ ಕ್ರಮದಲ್ಲಿ ಹಳೇ ಕಾಲದ ಡಂಬೆಲ್ಸ್ ಇಟ್ಟಿದ್ರು. ಹಾಗೇ ಒಂದು ಮೂಲೇಲಿ ನಿಲುವು ಕನ್ನಡಿ ಕೂಡಾ ಇತ್ತು. ಹಾಲಲ್ಲಿ ಹಾಗೇ ಮುಂದೆ ನಡೆದರೆ, ಎಡ ಭಾಗದ ಗೋಡೆಯ ಮಧ್ಯೆ ಒಂದು ಬಾಗಿಲು ಇತ್ತು. ಅದನ್ನ ದಾಟಿದ್ರೆ ಮಾಡಿಲ್ಲದ ಒಂದು ಕೋಣೆ ಇತ್ತು. ಆಗೆಲ್ಲಾ ಸುತ್ತಲೂ ಅಷ್ಟೊಂದು ಮಹಡಿ ಮನೆಗಳು ಇಲ್ಲದೇ ಇದ್ದಿದ್ರಿಂದ ಮೇಲೆ ಸೂರು ಇಲ್ಲದೇ ಇದ್ರೂ ತೊಂದರೆ ಇರಲಿಲ್ಲ. ಮೇಲೆ ಸೂರೇ ಇಲ್ದೇ ಇದ್ರೂ ಅದರ ಒಂದು ಪಾರ್ಶ್ವದ ಗೋಡೆಗೆ ಕಿಟಕಿ ಇತ್ತು. ಆ ಕಿಟಕಿ ನೋಡಿದಾಗಲೆಲ್ಲ, ನಂಗೆ ಅನಿಸ್ತ ಇತ್ತು. "ಮನೆಗೆ ಹಂಚೇ ಇಲ್ದೆ ಇದ್ರೆ, ಕಿಟಕಿ ಯಾಕೆ?" ನಾವು ಹುಡುಗ್ರು ಈ ಕಿಟಕಿ ಬಗ್ಗೆ ಮಾತಾಡಿಕೊಂಡ್ರೂ, ಜಿಮ್ ಗುರುಗಳ ಹತ್ರ ಕೇಳಿರ್ಲಿಲ್ಲ. ತುಂಬಾ ಸ್ಟ್ರಿಕ್ಟ್ ಟೀಚರ್ ಅವರು; "ಕರ್ನಾಟಕ ರತ್ನ", "ಮೈಸೂರು ಕೇಸರಿ" ಹೀಗೇ ಪ್ರಶಸ್ತಿ ಗೆದ್ದಿದ್ರಂತೆ. ನಂಗೆ ದೇಹದಾರ್ಢ್ಯದಲ್ಲಿ ಅಂಥಾ ಆಸಕ್ತಿ ಏನೂ ಇರಲಿಲ್ಲ. ತುಂಬಾ ಸೋಮಾರಿ ಬೇರೆ; ಆದ್ರೆ ನನ್ನ ಹಾಸ್ಟೆಲ್ ಮೇಟ್ಸ್ ಜೊತೆ ಜಿಮ್ಮಲ್ಲಿ ಒಳ್ಳೇ ಮಜಾ ಬರ್ತಾ ಇತ್ತು. ಪ್ರತಿದಿನಾನೂ ಒಂದೊಂದು ಸನ್ನಿವೇಶಗಳು, ದಿನಾನೂ ಒಬ್ರು ಬಕ್ರಾ ಆಗೇ ಆಗ್ತಾ ಇದ್ರು. ಇದಕ್ಕಿಂತಾ ಹೆಚ್ಚಾಗಿ, ಕಸರತ್ತು ಮುಗಿಸಿದ ಮೇಲೆ, ನಾವೆಲ್ಲಾ ಒಟ್ಟಿಗೆ ಹೋಗಿ ಜಿ ಟಿ ಆರ್ (ಗಾಯತ್ರಿ ಟಿಫನ್ ರೂಮ್) ಅಲ್ಲಿ ಕೂರ್ತಾ ಇದ್ವಿ. ಅದನ್ನಂತೂ ಮಿಸ್ ಮಾಡ್ಕೋತಾನೆ ಇರ್ಲಿಲ್ಲ. ಅದರ ಬಗ್ಗೆ ಮತ್ತೆ ಯಾವಗಲಾದ್ರೂ ಬರೀತಿನಿ.
ಜಿಮ್ಮಿಗೆ ಬರೋ ಹುಡುಗ್ರಲ್ಲಿ ಹೆಚ್ಚಿನವರಿಗೆ ಎದೆ, ಭುಜ ಮಾಂಸಖಂಡದ ಮೇಲೆ ಖಯಾಲಿ ಜಾಸ್ತಿ ಇರತ್ತೆ. ಅದಕ್ಕೆ ಬಸ್ಕಿ ಹಾಕೋದು, ಹೆವಿ ಡಂಬೆಲ್ಸ್ ಎತ್ತೋದು ಜಾಸ್ತಿ. ಹೇಗಾದ್ರೂ ಮಾಡಿ ಭಾರ ಎತ್ತೋ ಹುಮ್ಮಸ್ಸು. ಅದಕ್ಕೇ ಹಲ್ಲುಮಿಡಿ ಕಚ್ಚಿ ಎತ್ತಾ ಇದ್ರು. ಮೂತಿ ಪೂರಾ ಉಬ್ಬಿಸಿ ಹನುಮಂತನ ಥರಾ ಆಗ್ತಾ ಇದ್ದ ಅವ್ರನ್ನ ನೋಡಿದ ಕೂಡ್ಲೇ ನಮ್ಮ ಗುರುಗಳು ಕೈಲಾಸಂ ಅವರ ಈ ಜೋಕ್ ಹೇಳ್ತಾ ಇದ್ರು. "ಅಲ್ಲ ಕಣ್ರೋ, ನಿಮ್ಮ ಬಾಡಿ ಹನುಮಂತನ ಬಾಡಿ ಥರಾ ಅಗ್ಬೇಕು, ಮೂತಿ ಅಲ್ಲಾ. ಅದ್ಯಾಕೆ ಹಾಗೆ ಮೂತಿ ಕಿವುಚ್ತೀರಾ?" ಅಂತ.
ಆ ಜಿಮ್ ಈಗ್ಲೂ ಇದ್ಯೋ ಇಲ್ವೋ ಗೊತ್ತಿಲ್ಲ. ಚಾಮುಂಡಿ ಬೆಟ್ಟಕ್ಕೆ ಹತ್ರ ಇದ್ದ ವಿದ್ಯಾರಣ್ಯಪುರಂಗೆ ಒಂದು ಕಳೆ ಬಂದಿದ್ದೆ, ಈ ಜಿಮ್ಮಿಂದಾ ಅಂತಾ ನಂಗೆ ಅನಿಸ್ತಾ ಇತ್ತು.
- ಕನ್ನಡಿಗ
Use Baraha fonts to read this blog.. http://www.baraha.com
Saturday, March 17, 2007
Subscribe to:
Posts (Atom)