ಕವಿ ನಿಸಾರ್ ಅಹಮದ್‌ರ ಅಧ್ಯಕ್ಷತೆಯಲ್ಲಿ ಶಿವಮೊಗ್ಗೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಂದರ್ಭದಲ್ಲೇ ಸಹಜವಾಗೇ ಕನ್ನಡ ಭಾಷೆಯ ಅಳಿವು, ಉಳಿವು, ಉನ್ನತಿ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಜನಜಾಗೃತಿಯ ದೃಷ್ಟಿಯಿಂದ ಸಮ್ಮೇಳನಗಳು ನಿಜಕ್ಕೂ ಸಹಕಾರಿ. ನಮ್ಮ ಸಮ್ಮೇಳನಗಳು ಗಡಿಯಾಚೆಯೂ ಪ್ರಸರಿಸಬೇಕು. ಕಾಸರಗೋಡು, ಬೆಳಗಾವಿ, ಬಳ್ಳಾರಿಗಳಲ್ಲಿ ಕನ್ನಡ ಧ್ವನಿ ಮೊಳಗಬೇಕು. ಆದರೆ, ನಮ್ಮ ಭಾಷೆಯನ್ನು ಉಳಿಸಲು "ಭಾಷಾ ಪೋಲೀಸರು" ಅವಶ್ಯಕವೇ? ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದರೆ, ಭಾಷಾ ಚಳುವಳಿಕಾರರು ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಹೊರತಾಗಿ ಭಾಷಾ ಅಭಿವೃದ್ಧಿ ಸಚಿವಾಲಯ ಹಾಗೂ ಭಾಷಾ ಪೋಲೀಸ್ ಇಲಾಖೆಗಳನ್ನು ಆಗ್ರಹಿಸಿದರೂ ಆಶ್ಚರ್ಯವಿಲ್ಲ. ಅಷ್ಟೇ ಅಲ್ಲ, ಜನರ ತಾಳ್ಮೆಯ ಮಿತಿ ಕೂಡಾ ಮುಂಚಿನಂತಿಲ್ಲವೆನಿಸುತ್ತದೆ, ಒಂದು ಕಿರು ಘಟನೆ ಕೂಡಾ ಗಲಭೆಕಾರಕವಾಗಿ ಮಾರ್ಪಡುತ್ತಿದೆ.
ಇಂಥ ಸಂದರ್ಭದಲ್ಲಿ ನಾವು ಸಂಸ್ಕೃತ ಭಾಷೆಯನ್ನು ಗಮನಿಸಬೇಕು. ವ್ಯಾಕರಣ ಮತ್ತು ರಚನಾತ್ಮಕವಾಗಿ ಜಗತ್ತಿನ ಅತ್ಯಂತ ಉತ್ಕೃಷ್ಟ ಭಾಷೆಯಾಗಿದ್ದರೂ ಜನಸಾಮಾನ್ಯರಿಂದ ಬಳಕೆಯಾಗದೇ ಸಂಸ್ಕೃತ ಅವನತಿ ಹೊಂದಿತು. ಅದರೊಂದಿಗೆ, ಆ ಭಾಷೆಯಲ್ಲಿ ರಚಿತವಾದ ಎಷ್ಟೊಂದು ಕೃತಿಗಳು ಜನರಿಂದ ದೂರವಾಗಿವೆ. ನಾನು ಬಲ್ಲಂತೆ ಆಯುರ್ವೇದ, ಜ್ಯೋತಿಷ್ಯ, ವೇದಗಣಿತ, ಪುರಾತನ ಲೋಹಶಾಸ್ತ್ರ ಮುಂತಾದ ಪ್ರೌಢ ವಿಷಯಗಳ ಬಗ್ಗೆ ಸಂಸ್ಕೃತದಲ್ಲಿ ಸಾಕಷ್ಟು ಅಧ್ಯಯನವಸ್ತು ಮತ್ತು ಆಕರ ಗ್ರಂಥಗಳಿವೆ. ಆದರೆ ಅದನ್ನು ಅಧ್ಯಯಿಸುವ ಹಾಗೂ ಜನಸಾಮಾನ್ಯರಿಗೆ ತಿಳಿಯುವಂತೆ ಅರ್ಥೈಸುವ ಯಾವ ಕೆಲಸಗಳೂ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ನಡೆಸುತ್ತಿವೆ; ಉದಾಹರಣೆಗೆ, ಮೇಲುಕೋಟೆಯಲ್ಲಿನ "ಅಕಾಡೆಮಿ ಆಫ಼್ ಸಂಸ್ಕ್ರತ್ ರಿಸರ್ಚ್". ಅದರ ಲಿಂಕ್ ಇಲ್ಲಿದೆ.
ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಮಧ್ಯವರ್ತಿಗಳಿಲ್ಲದೆ ಸಂಸ್ಕೃತ ಅರ್ಥವಾಗುವುದು ಕಷ್ಟ. ಇಲ್ಲಿ ಸಂಸ್ಕೃತ ಬಲ್ಲವರನ್ನು ಮಧ್ಯವರ್ತಿಗಳು ಎಂಬ ಅರ್ಥದಲ್ಲಿ ಬಳಸಿದ್ದೇನೆ, ಉದಾಹರಣೆಗೆ, ಸರಳವಾಗಿ ದೇವರನ್ನು ಹೊಗಳುವ ಶ್ಲೋಕಗಳು ಕೂಡಾ ಗೂಡಾರ್ಥವುಳ್ಳ ಮಂತ್ರಗಳಾಗಿ ಮಾರ್ಪಟ್ಟು ಅರ್ಥವಾಗದೇ ಇದ್ದರೂ ನಾವು ಪೂಜಾರಿ ಪಠಿಸಿದ್ದಕ್ಕೆಲ್ಲಾ ತಲೆಯಾಡಿಸುತ್ತೇವೆ. ನಮ್ಮ ಹಾಗೂ ದೇವರ ನಡುವೆ ಭಾಷಾಂತರಕಾರರಾಗಿ ಕಾರ್ಯ ನಿರ್ವಹಿಸುವ ಪೂಜಾರಿಗಳು ಮಧ್ಯವರ್ತಿಗಳಲ್ಲವೇ? ಒಟ್ಟಿನಲ್ಲಿ ಸಂಸ್ಕೃತದಂಥ ಸರಳ ಸುಂದರ ಭಾಷೆ ಸಮರ್ಪಕ ಬಳಕೆಯಾಗದೇ ಜನರಿಂದ ದೂರವಾಯಿತಲ್ಲವೇ?
ಕನ್ನಡ ನುಡಿಯಲು ಬಿಗುಮಾನ ಬೇಡ,
ಕನ್ನಡ ಉಳಿಸಲು ಪೋಲೀಸರೂ ಬೇಡ
ಕನ್ನಡ ಬಳಸಿ, ಕನ್ನಡ ಉಳಿಸಿ ||
ಇದೊಂದೇ ನಮ್ಮ ಮಂತ್ರವಾದರೆ ಸಾಕು, ಭಾಷೆ ನೂರುಕಾಲ ಬಾಳುತ್ತದೆ.
- ಕನ್ನಡಿಗ
Use Baraha fonts to read this blog.. http://www.baraha.com
Tuesday, December 19, 2006
Subscribe to:
Posts (Atom)