Use Baraha fonts to read this blog.. http://www.baraha.com

Wednesday, December 06, 2006

ನಾನೇಕೆ ಅನಾಮಧೇಯ?

ನಿನ್ನೆ ದಟ್ಸ್‌ಕನ್ನಡ ದಲ್ಲಿ ತ್ರಿವೇಣಿಯವರ ಅಂಕಣ ಓದಿದೆ. ಮೊದಲಿಗೆ ನನಗೆ ನೆನಪಾಗಿದ್ದು ದಾಸರ ಪದ "ನೀನ್ಯಾಕೋ ನಿನ್ನ ಹಂಗ್ಯಾಕೋ ನಾಮದ ಬಲವೊಂದಿದ್ದರೆ ಸಾಕೋ". ಹೆಸರಿನಲ್ಲೇ ಎಲ್ಲಾ ಇದೆ, ನಿನ್ನ ನಾಮದ ಬಲ ಒಂದಿದ್ದರೆ ಸಕಲವೂ ಇದ್ದಂತೆ ಎಂಬರ್ಥದ ಪದ್ಯ ಅದು. ಅದನ್ನೇ ತ್ರಿವೇಣಿಯವರೂ ಸಮರ್ಥಿಸುತ್ತಾರೆ.
ನನ್ನ ಸಮಸ್ಯೆ ಪ್ರಾರಂಭವಾಗುವುದು ಇಲ್ಲೇ; ಉದಾಹರಣೆಗೆ ಹರಿಹರ ಎಂಬ ಹೆಸರಿನಲ್ಲೇ ದೈವವನ್ನು ಕಾಣುವ ನಾವು ಹರಿಹರಾಸುರ ಎಂಬ ಹೆಸರಿದ್ದರೆ ಆತ ದಾನವ ಎನ್ನುತ್ತೇವೆ. ದಾನವನಲ್ಲಿರಬಹುದಾದ ಗರಿಮೆ, ಉತ್ತಮ ಗುಣಗಳು ಅವನ ಹೆಸರಿನಿಂದಾಗಿ ಅನ್ವಯವಾಗುವುದಿಲ್ಲ. ಇನ್ನೂ ಸರಳವಾಗಿ ಹೇಳಬೇಕೆಂದರೆ, ವ್ಯಕ್ತಿಯ ಹೆಸರು ಅವನ ಜಾತಿ ಅಥವಾ ಕುಟುಂಬದ ಹಿನ್ನೆಲೆ ನೀಡುವುದರಿಂದ ಕೇಳುಗನಲ್ಲಿ ಪೂರ್ವಾಗ್ರಹ ಭಾವನೆಗಳನ್ನು ಮೂಡಿಸುತ್ತವೆ. ಲೇಖಕನೊಬ್ಬ ಭಟ್ಟ, ಜೋಶಿ ಆಗಿದ್ದರೆ ಅವನು ಬ್ರಾಹ್ಮಣನಾಗಿರಬೇಕು; ಆತ ದಲಿತರ/ಹರಿಜನರ ಬಗೆಗೆ ಬರೆದ ವಾಕ್ಯಗಳಲ್ಲೆಲ್ಲಾ ನಮಗೆ ಅನರ್ಥವೇ ದೊರಕುತ್ತದೆ. ಅದೇರೀತಿ ದಲಿತ ಲೇಖಕನ ಬರವಣಿಗೆಯಲ್ಲೆಲ್ಲಾ ಬ್ರಾಹ್ಮಣ ವಿರೋಧೀ ಅಭಿಪ್ರಾಯಗಳನ್ನು ಹುಡುಕುತ್ತೇವೆ. ಇದರಲ್ಲಿ ತಪ್ಪೇನಿಲ್ಲ ಬಿಡಿ; ಮಾನವನ ಸಹಜಗುಣವೇ ಹಾಗೆ ಎಂದು ನಾವು ಸುಮ್ಮನಿರಬಹುದು. ಇಲ್ಲವಾದರೆ ನಮ್ಮನ್ನು "ಅತಿ ಬುದ್ಧಿವಂತರು" ಎಂದು ಸಮಾಜ ಪಟ್ಟ ಕಟ್ಟುತ್ತದೆ.
ಸಮಸ್ಯೆ ಇಷ್ಟಕ್ಕೇ ಮುಗಿಯುವುದಿಲ್ಲ, ಎಷ್ಟೋ ಬಾರಿ ನಾವು ನಮ್ಮ ನಿಜ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮುಜುಗರ ಪಡುತ್ತೇವೆ. "ಅವರೇನೆಂದುಕೊಳ್ಳುತ್ತಾರೋ", "ನೊಂದುಕೊಳ್ಳಬಹುದು" ಎಂದು ನಮ್ಮನ್ನು ಇಬ್ಬಂದಿತನಕ್ಕೆ ಒಳಗಾಗಿ ನಮ್ಮ ಅಭಿಪ್ರಾಯಗಳನ್ನು ನೇರವಾಗಿ ನುಡಿಯುವುದರ ಬದಲು ಮಿಥ್ಯಾ ಪ್ರಶಂಸೆಗೆ ತೊಡಗುತ್ತೇವೆ. ಅತ್ಯಂತ ಕೆಟ್ಟ ಲೇಖಕ/ಕಿಯನ್ನೂ ಹೊಗಳಿ ಅಟ್ಟಕ್ಕೇರಿಸುವುದನ್ನು ದಿನ ನಿತ್ಯ ನೋಡಬಹುದು. ಇಷ್ಟೆಲ್ಲಾ ಅಧ್ವಾನಕ್ಕೆ ಕಾರಣವೇನೆಂದರೆ, ನಾವು ವ್ಯಕ್ತಿಯ ಅಭಿಪ್ರಾಯವನ್ನು ಗಮನಿಸದೇ, ವ್ಯಕ್ತಿಯನ್ನೇ ವಿಮರ್ಶಿಸುತ್ತೇವೆ. ಎಂಥ ಒಳ್ಳೆಯ ನಟನೋ, ಕವಿಯೋ, ಆಟಗಾರನೋ ಇರಬಹುದು; ಆದರೆ ಅವರು ನಟಿಸಿದ್ದೆಲ್ಲಾ, ಬರೆದಿದ್ದೆಲ್ಲಾ, ಆಡಿದ್ದೆಲ್ಲಾ ಚಿನ್ನ ಎಂದು ಹೇಳಲಾಗದು. ಉನ್ನತ ಸ್ಥಾನಕ್ಕೇರಿರುವರ ತಪ್ಪನ್ನು ತಿಳಿಸಿ ತಿದ್ದುವುದರ ಬದಲು ಹೊಗಳಿ ಹೊನ್ನಶೂಲಕ್ಕೇರಿಸುತ್ತೇವೆ.
ಈ ಬ್ಲಾಗ್ ಬರೆಯಲು ಆರಂಭಿಸಿದಾಗ ನಾನೂ ಕೂಡಾ ಇದೇ ಥರದ ಒತ್ತಡಕ್ಕೆ ಒಳಗಾಗಿದ್ದೆ. ನಾನು ಬರೆಯುವುದರ ಮೂಲ ಉದ್ದೇಶ ನನ್ನ ಬರವಣಿಗೆಯ ಶೈಲಿಯನ್ನು ಉತ್ತಮಗೊಳಿಸಿಕೊಳ್ಳುವುದು, ಅಭಿಪ್ರಾಯವನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವುದು ಹಾಗೂ ಇತರರಿಗೆ ಕಟು ವಿಮರ್ಶೆಗೆ ಅವಕಾಶ ಕಲ್ಪಿಸುವುದು. ಅನಾಮಧೇಯ ಕನ್ನಡಿಗನಾಗಿ ನನಗೆ ಇದೆಲ್ಲಾ ಸಾಧ್ಯ ಅನಿಸಿತು. ಹೆಸರಿನಲ್ಲೇ ಎಲ್ಲಾ ಇದೆ ಎಂದು ತಿಳಿಯದೇ ಪೂರ್ವಾಗ್ರಹ ಪೀಡಿತವಲ್ಲದೇ ಬದುಕುವುದು ಕೆಲವರಿಗಷ್ಟೇ ಸಾಧ್ಯ; ಇಲ್ಲದೇ ಹೋದರೆ ಬೇಗಡೆಯ ಬದುಕೇ ಗತಿ.

- ಕನ್ನಡಿಗ