Use Baraha fonts to read this blog.. http://www.baraha.com

Thursday, November 23, 2006

ಬೆಂಗಳೂರು - ಬ್ಯಾಂಗಲೋರ್ ಆದರೇನು ಬೆಂದಕಾಳೂರಾದರೇನು?

ಎಲ್ಲೋ ಓದಿದ ನೆನಪು; ಡಾ ರಾಜಕುಮಾರ್ ಅವರನ್ನು ಸಂದರ್ಶಿಸುತ್ತಾ ಆಂಗ್ಲ ಪತ್ರಿಕೆಯ ವರದಿಗಾರರೊಬ್ಬರು "ನೀವೇಕೆ ಬೇರೆ ಭಾಷೆಯಲ್ಲಿ ಉತ್ತರಿಸುವುದಿಲ್ಲ, ನಟಿಸುವುದಿಲ್ಲ" ಎಂದು ಕೇಳಿದಾಗ ಡಾ. ರಾ. ಉತ್ತರಿಸಿದರಂತೆ "ಇಲ್ಲಪ್ಪಾ ನನಗೆ ಬೇರೆ ಭಾಷೆಗಳಾವುದೂ ಬರುವುದಿಲ್ಲ ಕನ್ನಡ ಮಾತ್ರ ಗೊತ್ತು".
ಈ ಮಾತು ಡಾ. ರಾ ಅವರಿಗೆ ಮಾತ್ರವಲ್ಲ ನಮ್ಮಂಥ ಕೆಲ ಕೋಟಿ ಕನ್ನಡಿಗರಿಗೂ ಅನ್ವಯವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ, ಹಳ್ಳಿಯ ಪರಿಸರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನನಗಂತೂ ಇಂಜಿನೀಯರಿಂಗ್ ಪದವಿ ಮುಗಿಯುವವರೆಗೂ ಇಂಗ್ಲಿಷ್ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಇವತ್ತಿಗೂ ನನ್ನ ವಿಚಾರ, ಲೆಕ್ಕಗಳು ಮನದಾಳದಲ್ಲಿ ಕನ್ನಡದಲ್ಲೇ ನಡೆದು ನಾಲಿಗೆಯಿಂದ ಹೊರಬರುವಾಗ ತುರ್ಜುಮೆಗೊಳ್ಳಬೇಕಷ್ಟೆ. ಪರಿಸ್ಥಿತಿ ಹೀಗಿರುವಾಗ ಹಲವು ಬಾರಿ ನನ್ನ ಬೆಂಗಳೂರು ಮಿತ್ರರೊಡನೆ ಮಾತನಾಡುವಾಗ ಕನ್ನಡ ಗ್ರಾಮ್ಯ ಭಾಷೆಯ ಕೆಲ ಶಬ್ದಗಳು ಬಂದೇ ಬರುತ್ತವೆ. ನಾನು ಗಮನಿಸಿದಂತೆ ಬೆಂಗಳೂರಲ್ಲಿ ಹುಟ್ಟಿ ಬೆಳೆದ ಕನ್ನಡಿಗರಿಗಷ್ಟೇ ಶುದ್ಧ ಕನ್ನಡ ಶಬ್ದಗಳಿಂದ ತೊಂದರೆಯಾಗುವುದು; ಉಳಿದವರಿಗೆ ಅರ್ಥವಾಗದ ಪರಿಸ್ಥಿತಿಯೇನಿಲ್ಲ. ವಾಸ್ತವವಾಗಿ ನೋಡಿದರೆ ಈ ಪರಿಸ್ಥಿತಿ ಕರ್ನಾಟಕದಲ್ಲಿ ಮುಂಚಿನಿಂದಲೂ ಇದೆ; ಇದು ಐಟಿ, ಬಿಟಿಗಳಿಂದಾದ ಬದಲಾವಣೆಯೇನಲ್ಲ. ಐಟಿ, ಬಿಟಿಗಳಿಂದ ಇದು ಸರ್ವರಿಗೂ ಗೋಚರಿಸತೊಡಗಿದೆ; ಮಾಧ್ಯಮಗಳಲ್ಲಿ ಮೊದಲಿಗಿಂತಲೂ ಹೆಚ್ಚು ಚರ್ಚೆಯಾಗುತ್ತಿದೆ. ಸಹಜವಾಗಿಯೇ ಮಾಧ್ಯಮಗಳ ಚರ್ಚೆ ಸರ್ಕಾರದ ಮೇಲೆ ಒತ್ತಡ ಹೇರುವುದಲ್ಲದೆ, ಸರ್ಕಾರದ ಗಮನವನ್ನು ಹೆಸರು ಬದಲಾವಣೆಯಂಥ ಕ್ಷುಲ್ಲಕ ಕಾರ್ಯಗಳೆಡೆಗೆ ಸೆಳೆಯುತ್ತದೆ. ಇದರ ಪರಿಣಾಮವಿಷ್ಟೇ; ಮೂಲಭೂತ ಸೌಕರ್ಯಗಳ ಅವಶ್ಯಕತೆ ಹಾಗೂ ಅಭಿವೃದ್ಧಿಯೆಡೆಗೆ ಗಮನ ಹರಿಸದೇ ನಮ್ಮ ಚುನಾಯಿತ ಸದಸ್ಯರು ಅವಧಿ ಕಳೆದು ಮುಂದಿನ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ದಿನವೂ ಕುಡಿಯುವ ನೀರಿಗೆ ಸರತಿ ನಿಲ್ಲುವ ಬೊಮ್ಮನಹಳ್ಳಿಯ ಜನರ ಸಾಲು ಉದ್ದವಾಗುತ್ತದೆ.
ಸ್ಥಳನಾಮ ಬದಲಾವಣೆಯ ಮೂಲ ಉದ್ದೇಶ ಜನಜಾಗೃತಿ ಮೂಡಿಸುವುದು ಹಾಗೂ ಅಪಭೃಂಶಗೊಂಡ ಮೂಲನಾಮವನ್ನು ತಿದ್ದುವುದು ಎಂದು ಒಪ್ಪಬಹುದಾದರೂ, ನಾವಿರುವ ಪರಿಸ್ಥಿತಿಯಲ್ಲಿ ಪ್ರತಿ ಕಾರ್ಯದ ಆದ್ಯತೆ ನೋಡುವುದು ಅವಶ್ಯಕ. ಒಂದು ಸರಳ ಲೆಖ್ಖ: ಬೆಂಗಳೂರಿನಲ್ಲಿ ಸುಮಾರು ಒಂದು ಲಕ್ಷ ಐಟಿ ನೌಕರರಿದ್ದರೆ, ದಿನದ ಟ್ರಾಫಿಕ್ ಜಾಮಿನಿಂದ ಆಗುವ ನಷ್ಟದಲ್ಲಿ ಬರೀ ಹತ್ತು ನಿಮಿಷಗಳ ಉಳಿತಾಯವಾದರೂ ೧೦೦೦೦೦ * ೧೦ = ೧೦೦೦೦೦೦ / ೬೦ = ೧೬೬೬೬.೬೬ ಘಂಟೆಗಳು ಅಂದರೆ ಸುಮಾರು ೬೯೫ ದಿನಗಳು ಅಥವಾ ಸುಮಾರು ಎರಡು ವರುಷಗಳ ಉಳಿತಾಯ. ಜೀವನದ ಉನ್ನತಿಯ ಹಂತದಲ್ಲಿರುವ ನಮ್ಮ ಪ್ರಜೆಗಳ ಎರಡು ವರುಷಗಳನ್ನು ಪ್ರತೀದಿನ ಬರೀ ಹತ್ತು ನಿಮಿಷಗಳ ಟ್ರಾಫಿಕ್ ಜಾಮಿನಲ್ಲಿ ಉಳಿಸಬಹುದಾದರೆ, ಇತರೆ ಎಲ್ಲಾ ಉದ್ಯಮಗಳು, ಇಂಧನ, ಮಾಲಿನ್ಯಗಳ ಉಳಿತಾಯವನ್ನು ನೀವೇ ಊಹಿಸಿ. ಇಂಥ ಸಂದರ್ಭದಲ್ಲಿ ನಮ್ಮ ಸರ್ಕಾರ ಮತ್ತು ಅದರ ಅಧಿಕಾರವರ್ಗ ಮೂಲ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕೋ ಅಥವಾ ಕಡ್ಲೆಕಾಯಿ ಪರಿಷೆಯ ಉದ್ಘಾಟನೆ, ಮೈಸೂರಿನಲ್ಲಿ ಚುನಾವಣೆ, ಬೆಂಗಳೂರಿನ ಸ್ಥಳನಾಮ ಬದಲಾವಣೆ ಮುಖ್ಯವೋ? ನಮ್ಮನ್ನು ನೂರಾರು ವರುಷ ಆಳಿದ ಆಂಗ್ಲರು ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ಈಗ ನಾವು ಅವುಗಳನ್ನು ಹುಡುಕಿ ಚರ್ಚಿಸುವುದು ಅನವಶ್ಯಕ. ಮುಂದೊಂದು ಕಾಲದಲ್ಲಿ ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಚರ್ಚಿಸಲು ಬೇರೇನೂ ಇಲ್ಲವಾದರೆ ಈ ಕೆಲಸಗಳನ್ನು ಮಾಡಬಹುದು.
ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ಕಾರವನ್ನು ನಮ್ಮ ಅನುಕೂಲಕ್ಕನುಗುಣವಾಗಿ ದುಡಿಸಿಕೊಳ್ಳುವುದೂ ಒಂದು ಕಲೆ. ಅದು ಪ್ರಜಾಪ್ರಭುತ್ವದ ಆಶಯ ಕೂಡಾ; ಅದಿಲ್ಲದೇ ಸರ್ಕಾರ ತನಗಿಷ್ಟವಾದ ನಿರ್ಧಾರ ತೆಗೆದುಕೊಳ್ಳುತ್ತಾ, ಮನಬಂದಂತೇ ಆಡಳಿತ ನಡೆಸಿದರೆ ಕಮ್ಯೂನಿಸಂಗೂ ಪ್ರಜಾಪ್ರಭುತ್ವಕ್ಕೂ ವ್ಯತ್ಯಾಸವೇನು? ಅದೇ ನಿಟ್ಟಿನಲ್ಲಿ ನಮ್ಮ ಮಾಧ್ಯಮಗಳೂ ಕಾರ್ಯಪ್ರವೃತ್ತವಾದರೆ ಅನುಕೂಲ. ಜನ ಸಮಸ್ಯೆಗಳೆಡೆಗೆ ಸರ್ಕಾರದ ಗಮನ ಸೆಳೆಯಿರಿ, ಕುಂದುಕೊರತೆಗಳನ್ನು ಪ್ರಚಾರ ಪಡಿಸಿ, ಪ್ರಜೆಗಳ ಅಮೂಲ್ಯ ಕಾಲವನ್ನು ಉಳಿಸಿ. ಇದೇ ನನ್ನ ಆಶಯ.

- ಕನ್ನಡಿಗ