Use Baraha fonts to read this blog.. http://www.baraha.com

Sunday, May 14, 2006

ದೇಶಕಾಲಗಳ ನಡುವೆ..

ಚೆಸ್ ಆಟದ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ನೀಡುವ ಕಿವಿಮಾತು : "ಉತ್ತಮ ಚೆಸ್ ಪಟುವಾಗಲು ಆಟದ ಎಲ್ಲ ಸೂಕ್ಷ್ಮ ನಡೆಗಳನ್ನು ಕಲಿಯಬೇಕು. ಆದರೆ ಪಂದ್ಯ ಗೆಲ್ಲುವ ಆಟಗಾರನಾಗಬೇಕಾದರೆ ಎದುರಾಳಿಗಳ ಆಟದ ನಡೆಗಳನ್ನು ಕೂಡಾ ಅರಿಯಬೇಕು". ನನ್ನ ಅಭಿಪ್ರಾಯದಲ್ಲಿ ಈ ಮಾತು ಯಾವುದೇ ರಂಗದ ವಿದ್ಯಾರ್ಥಿಗೆ ಅನ್ವಯವಾಗುತ್ತದೆ. ಉತ್ತಮ ಲೇಖಕನಾಗಬೇಕಾದರೆ ಮೊದಲು ಸಾಹಿತ್ಯವನ್ನು ಅಭ್ಯಸಿಸುವುದು ಮುಖ್ಯ. ವಾಸ್ತವವಾಗಿ ಗಮನಿಸಿದರೆ, ಒಬ್ಬ ಲೇಖಕನ ಸೃಜನಶೀಲತೆ ಕೂಡಾ ಆತನ ಓದು ಮತ್ತು ಒಡನಾಟವನ್ನವಲಂಬಿಸಿರುತ್ತದೆ. ಹೀಗೆ ಅಧ್ಯಯನಶೀಲತೆ ಪ್ರತಿಯೊಬ್ಬ ಬರಹಗಾರನ ಕರ್ತವ್ಯವಾದರೂ ಗತ ಹಾಗೂ ವರ್ತಮಾನದ ಪ್ರತಿ ಸಾಹಿತ್ಯ ಕೃತಿಗಳ ಅಧ್ಯಯನ ಪ್ರಾಯೋಗಿಕವಾಗಿ ಅಸಾಧ್ಯ. ಈ ನಿಟ್ಟಿನಲ್ಲಿ, ಚಿಂತಕರ ಚಾವಡಿ, ಸಾಹಿತ್ಯ ಕೂಟಗಳು ಬರಹಗಾರನನ್ನು ಪ್ರಸ್ತುತದಲ್ಲಿರಿಸಲು ಸಹಕಾರಿ.
ಆದರೆ, "ಪರದೇಶಿ"ಗಳಾಗಿರುವ ನನ್ನಂತವರಿಗೆ, ಆಗಾಗ ನಡೆಯುವ ಕೂಟ, ಚಿಕ್ಕ ಪುಟ್ಟ ಸಮ್ಮೇಳನಗಳು ಮಾಹಿತಿ ಆಕರಿಸಲು ಸಹಾಯ ನೀಡಿದರೂ, ಹೆಚ್ಚಿನ ಸಂದರ್ಭಗಳಲ್ಲಿ ಇವು ಹರಟೆ ಕೂಟಗಳಾಗುವ ಅಪಾಯ ಜಾಸ್ತಿ. ಸದ್ಯದ ಮಟ್ಟಿಗೆ ಹಲವಾರು ಅಂತರ್ಜಾಲ ತಾಣಗಳು ಉಪಲಬ್ಧವಿದ್ದರೂ ಗಂಭೀರ ಸಾಹಿತ್ಯ ಚಿಂತನೆಗೆ ಅಥವಾ ಅಧ್ಯಯನಕ್ಕೆ ದೊರಕುವ ತಾಣಗಳು ತುಂಬಾ ಕಮ್ಮಿ. ಅದರಲ್ಲೂ ಕನ್ನಡ ಸಾಹಿತ್ಯವಂತೂ ಅಂತರ್ಜಾಲ ತಾಣಗಳಲ್ಲಿ ದೊರೆಯುವ ಸಂಭವನೀಯತೆ ಇಲ್ಲವೇ ಇಲ್ಲವೆನ್ನಬಹುದು. ಜಾಗತೀಕರಣದ ಈ ದಿನಗಳಲ್ಲಿ ಕರ್ನಾಟಕದ ಹೊರ ನಿಲ್ಲುವ ಅನಿವಾರ್ಯತೆಯಿರುವಾಗ, ಸಾಹಿತ್ಯಾಸಕ್ತಿ ಇದ್ದರೂ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ ಎಂಬ ದೂರನ್ನು ನಾನು ಹಲವಾರು ಬಾರಿ ಕೇಳಿದ್ದೇನೆ. ಇಂಥ ಸಂದರ್ಭದಲ್ಲಿ, ಕನಿಷ್ಟ ಪಕ್ಷ ಹಲವು ಲೇಖಕರ ಕೃತಿಗಳು ವಿಮರ್ಶೆಯೊಂದಿಗೆ ಓದಲು ಲಭ್ಯವಾದರೆ ಅದೇ ಪುಣ್ಯ. ಇದೇ ಕಾರಣಕ್ಕಾಗಿ ನಾನು "ದೇಶಕಾಲ" ಪತ್ರಿಕೆಯನ್ನು ಮೆಚ್ಚುತ್ತೇನೆ.
"ಕನ್ನಡವೇ ನಿತ್ಯ"ದ ಶ್ರೀರಾಮ್ "ದೇಶಕಾಲ"ದ ಬಗೆಗೆ ಬ್ಲಾಗೊಂದರಲ್ಲಿ ಬರೆದಿದ್ದಾರೆ. ಓದುಗರ ಸಂಖ್ಯಾಕೊರತೆಯಿಂದ ಬಳಲುತ್ತಿರುವ ಮುದ್ರಣ ಮಾದ್ಯಮದಲ್ಲಿ ಗಂಭೀರ ಸಾಹಿತ್ಯದ ಪತ್ರಿಕೆಯೊಂದನ್ನು ಕೈಸುಟ್ಟುಕೊಳ್ಳದೇ ಪ್ರಕಟಿಸಿ, ಸಕಾಲಕ್ಕೆ ತಲುಪಿಸುವ ಜವಾಬ್ದಾರಿ ಅಸೀಮ ಸಾಧನೆಯೇ ಸರಿ. ಪತ್ರಿಕೆಯ ಚಂದಾದಾರರನ್ನು ಹೆಚ್ಚಿಸುವುದು ಅಂದರೆ "ಮೊಟ್ಟೆ ಮೊದಲೋ ಕೋಳಿ ಮೊದಲೋ" ಎಂಬ ಸಮಸ್ಯೆಯಷ್ಟೇ ಸುಲಭ. ಚಂದಾದಾರರಿಲ್ಲದೇ ಜಾಹೀರಾತು ವೆಚ್ಚ ಭರಿಸುವುದು ಕಷ್ಟ, ಜಾಹೀರಾತಿಲ್ಲದೇ ಚಂದಾದಾರರಿಲ್ಲ. "ದೇಶಕಾಲ"ದ ಪ್ರತಿ ಸಂಚಿಕೆಯಲ್ಲೂ ಹೊಸತನವನ್ನು ನಾನಂತೂ ಗಮನಿಸಿದ್ದೇನೆ. ಕವನ ಹಾಗೂ ಕಥಾ ಪ್ರಕಾರಗಳಿಗೆ ಸಮಾನ ಅವಕಾಶ ಕಲ್ಪಿಸಿ, ಉತ್ತಮ ಲೇಖಕರ ನೂತನ ಪ್ರಕಟಣೆಗಳ ತುಂತುರು ದರ್ಶಿಸಿ, ಒಟ್ಟಾರೆ ಸಾಹಿತ್ಯ ಉಣಬಡಿಸುವ "ದೇಶಕಾಲ" ಉಪಯುಕ್ತ ಹೊತ್ತಿಗೆ ಎಂದು ನನ್ನ ಅನಿಸಿಕೆ.

- ಕನ್ನಡಿಗ

"ಅವಲೋಕನ"ವನ್ನು ಗಮನಿಸಿದ "ಸುಧಾ"..


















- ಕನ್ನಡಿಗ