ನಾನು ಇದುವರೆಗೂ ಹಲವು ನೂರು ಸಿನಿಮಾಗಳನ್ನು ನೋಡಿರಬಹುದು. ಆರಂಭದಲ್ಲಿ ನ್ಯೂಸ್ ರೀಲಿಂದ ಹಿಡಿದು ಶುಭಂ ಎನ್ನುವವರೆಗೆ ನೋಡಿರುತ್ತೇನೆ. ಒಂದು ಸಿನಿಮಾ ಮುಕ್ತಾಯದ ನಂತರದ ಜಗತ್ತು ನನ್ನನ್ನು ಸದಾ ಕಾಡುವ ವಿಷಯ. ಪ್ರೇಮ ಚಿತ್ರವಾದರೆ ಸಾಮಾನ್ಯವಾಗಿ ಹೀರೋ ಮತ್ತು ಹೀರೋಯಿನ್ ಒಂದಾಗುತ್ತಾರೆ ಇಲ್ಲವೇ ಬೇರೆಯಾಗುತ್ತಾರೆ (ಅದು ಟ್ರೆಂಡ್ ಹಾಗೂ ನಿರ್ದೇಶಕನ ಅಭಿರುಚಿಯನ್ನು ಅವಲಂಬಿಸಿದ ವಿಚಾರ). ಸುಖಾಂತ್ಯ ಅಥವಾ ದು:ಖಾಂತವನ್ನವಲಂಬಿಸಿ ಕೊನೆ ಕೆಲ ರೀಲುಗಳಲ್ಲಿ ಹೊಡೆದಾಟಗಳಿರಬಹುದು ಅಥವಾ ತ್ಯಾಗವಿರಬಹುದು. ಆದರೆ ಅದರ ನಂತರ ಏನಾಯಿತು? ವಿಜ್ರಂಭಿಸಿದ ಹೀರೋ ತನ್ನ ಜೀವನವಿಡೀ ಅದೇ ಥರಾ ಬದುಕಿದನಾ ಅಥವಾ ಬದಲಾಗಿ ಸಾಮಾನ್ಯ ಪ್ರಜೆಯಾದನಾ? ಕಥೆಯ ಅಂತ್ಯದೊಂದಿಗೆ ಪಾತ್ರದ ಆದರ್ಶ, ತ್ಯಾಗ ಮುಂತಾದ ಸದ್ಗುಣಗಳು ಮಾಯವಾದವೇ? ನನ್ನ ಅನುಭವದಲ್ಲಿ ಕೇವಲ ಬೆರಳೆಣಿಕೆಯಷ್ಟು ನಿರ್ದೇಶಕರು ಮುಂದಿನ ಮಾರ್ಗವನ್ನು ಸೂಚಿಸುವ ಅಂತ್ಯವನ್ನು ಒಂದು ಚಿತ್ರಕ್ಕೆ ದೊರಕಿಸಿಕೊಟ್ಟಿರುತ್ತಾರೆ. ಉದಾಹರಣೆಗೆ, ಉಪೇಂದ್ರ ನಿರ್ದೇಶಿಸಿದ್ದ ಓಂ ಚಿತ್ರದಲ್ಲಿ ರೌಡಿಯಾಗಿ ಮೆರೆದಿದ್ದ ಹೀರೋ ಕೊನೆಯಲ್ಲಿ ಅಂಗವಿಕಲನಾಗಿ ಬೀಡಾ/ಟೀ ಅಂಗಡಿಯಿಟ್ಟು ಜೀವನ ನಡೆಸಿದ ಎಂಬಂಥ ಸಂದೇಶವಿದೆ. ಎಷ್ಟೋ ಬಾರಿ ಒಂದು ಚಿತ್ರದ ಅಂತ್ಯವೇ ಇನ್ನೊಂದು ಚಿತ್ರದ ಆರಂಭವಾಗಬಹುದು.
ಇತ್ತೀಚೆಗಂತೂ ನಮ್ಮ ಕನ್ನಡ ಚಿತ್ರರಂಗದಲ್ಲಿ ರೌಡಿಸಮ್ ಕಥಾವಸ್ತುವೇ ಮಿನಿಮಮ್ ಗ್ಯಾರಂಟಿ ಚಿತ್ರಗಳಾಗಿವೆ. ಸಹಜವಾಗಿ ಪ್ರೇಕ್ಷಕ ಪ್ರಭುವಿಗೆ, ಕೊಚ್ಚಿ ಕಡಿಯುವ ಮೃಷ್ಟಾನ್ನ ಭೋಜನವಿರುತ್ತದೆ. ಇಂಥ ಎಲ್ಲ ರೌಡಿ ಚಿತ್ರಗಳ ಸಂದೇಶ ಒಂದೇ; ಆದರೂ ಜನ ಅವುಗಳನ್ನು ನೋಡ್ತಾರಲ್ಲಾ ಎಂದು ಹಲವು ಬಾರಿ ನಾನೇ ಕುತೂಹಲಕ್ಕೆ ಒಳಗಾಗಿದ್ದೇನೆ. ನನ್ನ ಅನಿಸಿಕೆ ಇಷ್ಟೆ; ಬೆಂಗಳೂರಿನಂಥ ನಗರದಲ್ಲಿ ಒದ್ದಾಡಿ ಬೇಯುವ ಜೀವಕ್ಕೆ, ಉಕ್ಕಿ ಹರಿಯುವ ಕೋಪವನ್ನು ನಿಜ ಜೀವನದಲ್ಲಿ ತೋರಿಸುವ ಅವಕಾಶವಿದ್ದರೆ, ಅದೆಷ್ಟೋ ರಾಜಕಾರಣಿಗಳು ಸೌತೆಕಾಯಿ ಕೊಚ್ಚಿದಂತೆ ಕೊಚ್ಚಿ ಹೋಗುತ್ತಿದ್ದರು. ಅದನ್ನೇ ತೆರೆಯ ಮೇಲೆ ದರ್ಶನ್ ಮಾಡಿದಾಗ ಮುಂದಿನ ಬೆಂಚಿನಲ್ಲಿ ಕುಳಿತಿರುವ ಜೀವಕ್ಕೆ ನೆಮ್ಮದಿ ಅನಿಸಬಹುದು. ಹೀಗೇ ಟ್ರಾಫಿಕ್ ಜಾಮ್ ಇರುವವರೆಗೆ, ವ್ಯವಸ್ಥೆ ಮುಂದುವರೆಯುವವರೆಗೆ ಕೊಚ್ಚಿ ಕಡಿಯುವ ಕಥಾ ವಸ್ತುವಿಗೆ ಮೋಸವಿಲ್ಲ.
ಇನ್ನು ತೆರೆಯ ಮೇಲೆ ಮೆರೆಯುವ ಆಸೆ ಇರುವ ಅಧಿಕಾರಿಗಳು, ರಾಜಕಾರಣಿಗಳಿಗಂತೂ ನಮ್ಮಲ್ಲಿ ಬರವಿಲ್ಲ. ಅದರಲ್ಲಿ ಮುಖ್ಯವಾಗಿ ಕೆ ಶಿವರಾಮ್, ಬಿ ಸಿ ಪಾಟೀಲ್, ಸಿ ಪಿ ಯೋಗೇಶ್ವರ್ ಮುಂತಾದವರು ಪ್ರಮುಖರು. ಹಣವೊಂದೇ ಆಸ್ತಿಯಾಗಿರುವ ಇವರು ತೆರೆಯ ಮೇಲೇ ಕರುಣಾಮಯಿ ಅಣ್ಣ, ಉತ್ತಮ ಪ್ರಜೆ, ನ್ಯಾಯಕ್ಕಾಗಿ ಹೋರಾಡುವ ನಾಯಕ ಇತ್ಯಾದಿ ಪಾತ್ರ ವಹಿಸುವುದರ ಬಗ್ಗೆ ನನ್ನ ವಿರೋಧವಿದೆ. ಒಬ್ಬ ನಟ ಇಂಥ ಪಾತ್ರಗಳನ್ನು ತನ್ನ ಹೊಟ್ಟೆಪಾಡಿಗೆ ನಿರ್ವಹಿಸುವುದಕ್ಕೂ, ಈ ಖದೀಮರ ಚಿತ್ರಗಳ ಮೂಲಕ ಜನಮಾನಸದಲ್ಲಿ ಮೆರೆಯುವ ಹೊಂಚಿಕೆಗೂ ವ್ಯತ್ಯಾಸವುಂಟು. ತೀರಾ ಇತ್ತೀಚಿನ ಉದಾಹರಣೆಯೆಂದರೆ, ಕಳೆದ ವಾರ ಬಿಡುಗಡೆಯಾದ ನಾಗ ಚಿತ್ರ. ಅದರಲ್ಲಿ ನಮ್ಮ ಖದೀಮ ಅಧಿಕಾರಿ ಕೆ ಶಿವರಾಮ್ ನ್ಯಾಯಕ್ಕಾಗಿ ಹೋರಾಡುವ ಪಾತ್ರವಿದೆಯಂತೆ. ಕಿಂಚಿತ್ತಾದರೂ ಆತ್ಮಸಾಕ್ಷಿಯಿದ್ದರೆ ಬಡ ಜನರ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಇಟ್ಟು ಈ ವ್ಯಕ್ತಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೆಗ್ಗಣವಾಗಿರುತ್ತಿರಲಿಲ್ಲ. ಮಾತೆತ್ತಿದರೆ ದಲಿತ ಸಂಘಟನೆಗಳ ಸೆರಗ ಹಿಂದೆ ಓಡುವ ಈತನ ಸಿನಿಮಾ ಹುಚ್ಚು ಅಸಹನೀಯ.
ಇಂಥ ವೇಸ್ಟ್ ಸಿನಿಮಾಗಳ ನಡುವೆ ಅಪರೂಪಕ್ಕೊಮ್ಮೆ ಬರುವ ಒಳ್ಳೇ ಚಿತ್ರಗಳ ಬಗ್ಗೆ ನಮಗೆ ತಿಳಿಸಲು ಪ್ರತೀವಾರ ನೋಡಿ ವಿಮರ್ಶಿಸುವ ಪತ್ರಕರ್ತರು ನಿಜಕ್ಕೂ ಗ್ರೇಟ್ ಅಂತ ನನ್ನ ಅನಿಸಿಕೆ.
- ಕನ್ನಡಿಗ
Use Baraha fonts to read this blog.. http://www.baraha.com
Tuesday, April 25, 2006
Subscribe to:
Posts (Atom)