Use Baraha fonts to read this blog.. http://www.baraha.com

Saturday, January 28, 2006

History Repeats

ಪಂಚಶೀಲ ಹರಣ

ಸರಿಯಾದ ಕಾರಣವಿಲ್ಲದೇ, ಕಣ್ಣಾರೆ ಕಾಣದೇ, ಯಾವುದನ್ನೂ ನಂಬದ ನಾನು ಸ್ವತ: ನೋಡದಿದ್ದರೂ, ನಮ್ಮ ಪ್ರಥಮ ಪ್ರಧಾನಿ ನೆಹರೂ ಅವರನ್ನು ಅಭಿಮಾನಿಸುತ್ತೇನೆ. ಕಾರಣವೇನೆಂದರೆ, ನನ್ನ ಸಂಬಂಧಿ ಹಿರಿಯರೊಬ್ಬರು ನೆಹರೂ ಅವರನ್ನು ಕಣ್ಣಾರೆ ಕಂಡವರು, ನೆಹರೂ ವ್ಯಕ್ತಿತ್ವ, ವಾಕ್ಪಟುತ್ವವನ್ನು ಮೆಚ್ಚಿದವರು, ನನ್ನನ್ನು ಸಮಜಾಯಿಸಿದ್ದಾರೆ. ಅವರ ಅಭಿಪ್ರಾಯಗಳನ್ನು ಸ್ವತ: ಒರೆಗೆ ಹಚ್ಚುವುದು ಅಸಾಧ್ಯವಾದದ್ದರಿಂದ ಅವುಗಳನ್ನು ನಂಬಿ ನೆಹರೂ ಅವರ ಆದರ್ಶಗಳ ಅಭಿಮಾನಿಯಾಗಿದ್ದೇನೆ. ಆದರೆ ನೆಹರೂ ಅವರ ಕೆಲ ನೀತಿಗಳನ್ನು ನಾನು ಖಂಡಿತಾ ಒಪ್ಪುವುದಿಲ್ಲ, (ಅದಕ್ಕೆ generation gap ಕಾರಣವಿರಬಹುದು). ಅವುಗಳಲ್ಲಿ ಮುಖ್ಯವಾಗಿ "ಪಂಚಶೀಲ" ಒಂದು. ಪಂಚಶೀಲವನ್ನು ನೆಹರೂ ಅವರು ಎಷ್ಟು ಒಪ್ಪಿ ಅಪ್ಪಿದ್ದರೆಂದರೆ, ಚೈನಾ ಅದನ್ನು ಅಸಿಂಧುಗೊಳಿಸಿ ಭಾರತದ ಮೇಲೆ ದಾಳಿ ನಡೆಸಿ ಮಣಿಸಿದಾಗ, ಸಮರದಲ್ಲಿ ಸೋತ ನೋವಿಗಿಂತ ನೆಹರೂರವರನ್ನು ಕಂಗೆಡಿಸಿದ್ದು "ಪಂಚಶೀಲಹರಣ".
ಒಂದೇ ವಾಕ್ಯದಲ್ಲಿ ಹೇಳುವುದಾದರೆ, ನೆಹರೂ ಮೂಸೆಯಿಂದ ಹೊರಬಂದ ಪಂಚಶೀಲ ತತ್ವಗಳು ಭಾರತದ ನೆರೆಹೊರೆಯ ಬಾಂಧವ್ಯ ವೃದ್ಧಿಗಾಗಿ ನಾವು ಸ್ವತಃ ವಿಧಿಸಿಕೊಂಡ ಕಟ್ಟುಪಾಡು. ಅಂದಿಗೂ ಇಂದಿಗೂ ಮನೆಯ ಯಜಮಾನನ ಮಾತೇ ಅಂತಿಮ ಎಂದು ನಂಬಿದ ಸಾಮಾಜಿಕ ವ್ಯವಸ್ಥೆ ನಮ್ಮದು. ಸಹಜವಾಗಿ ಕಿರಿಯ ತಮ್ಮನಾಗಿ ಸರದಾರ ಪಟೇಲ್ ಅವರಂಥ ನಾಯಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿರಲಿಲ್ಲ. ಮುಂದಿರುವ ಆಪತ್ತಿನ ಬಗ್ಗೆ ಸರದಾರ ಪಟೇಲ್ ನಮ್ಮನ್ನು ಮುನ್ನೆಚ್ಚರಿಸಿದ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಆದರೂ "ಅಪ್ಪ ನೆಟ್ಟ ಆಲದಮರ" ಎಂದು ಅದಕ್ಕೇ ನೇಣು ಹಾಕಿಕೊಂಡಿದ್ದಾಗಿತ್ತು. ಅದಕ್ಕೇ ಅರೆ ಶತಮಾನದ ನಂತರವೂ ದೇಶಕ್ಕೆ ಕಾಶ್ಮೀರಿ ಸಮಸ್ಯೆಯಾದರೆ, ನಮ್ಮ ಹಳ್ಳಿಗಳಲ್ಲಿ ಗಡಿತಂಟೆ, ಬೇಲಿ ಜಗಳಗಳಂತ ಕ್ಷುಲ್ಲಕ ಕಾರಣಗಳಿಗೆ ಕೋರ್ಟು ಅಲೆಯುತ್ತಿರುವ ಕುಟುಂಬಗಳನ್ನು ಕಾಣಬಹುದು. ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ "ಮನೆಯ ಹಿರಿಯಣ್ಣನ ಮಾತಿಗೆ ಇದಿರಿಲ್ಲ" ಎಂಬ ನೀತಿಯೇ ಇದಕ್ಕೆಲ್ಲ ಕಾರಣವಿರಬಹುದೆ? ಅದಿರಲಿ, ನಮ್ಮ ಮನೆಯ ನೀತಿ ಪದ್ಧತಿಗಳನ್ನು ನೆರೆಯವರು ಪಾಲಿಸಬೇಕಾದ ಅವಶ್ಯಕತೆಯೂ ಏನಿದೆ? ಸಹಜವಾಗಿ ಚೀನಾ ದೇಶವೂ ಭಾರತವನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಊರಿಗೆ ಉಪಕಾರಿಯಾದ ಹಿರಿಯಣ್ಣ ಮನೆಗೆ ಮಾರಿಯಾಗಿದ್ದ. ಶತಮಾನಗಳಿಂದ ನಮ್ಮನ್ನು ರಕ್ಷಿಸಿದ ಹಿಮಾಲಯವೂ ಹೊರಗಿನ ಆಕ್ರಮಣದಿಂದ ಮನೆಯನ್ನು ಕಾಪಾಡಲು ಅಶಕ್ತವಾಗಿತ್ತು.
ಸಾಮಾನ್ಯವಾಗಿ ಅರಿತವರು ತಪ್ಪಿನಿಂದ ಪಾಠ ಕಲಿತರೆ ಮೂರ್ಖರು ತಪ್ಪನ್ನು ಪುನರಾವರ್ತಿಸುತ್ತಾರೆ. ಆದರೆ ಇಂದಿಗೂ ನಾವು ನಮ್ಮ ಕಿರಿಯರನ್ನು ಪ್ರಶ್ನಿಸಲು ಉತ್ತೇಜಿಸುವುದಿಲ್ಲ, ಅವರ ಸಲಹೆ ಕೇಳುವುದಿಲ್ಲ. ಇದು ಬದಲಾಗುವುದು ಸಾಧ್ಯವೇ? ಕಾಲವೇ ಉತ್ತರಿಸಬೇಕು.

- ಕನ್ನಡಿಗ

Thursday, January 26, 2006

Nasbandi and IT!

ನಸಬಂದಿ ಹಾಗೂ ಐಟಿ!

ಮೊನ್ನೆ ಊಟಕ್ಕೆ ಕುಳಿತಾಗ ನನ್ನ ಅಮೇರಿಕನ್ ಸಹೋದ್ಯೋಗಿ ಕೇಳಿದ; ಅಷ್ಟೊಂದು ಬಡತನವಿದ್ದರೂ, ಭಾರತೀಯರು ಐಟಿಯಲ್ಲಿ ಇಷ್ಟೊಂದು ಸಾಧಿಸಲು ಕಾರಣವೇನು? ನಿಮ್ಮ ರಾಜಕಾರಣಿಗಳ ದೂರದರ್ಶಿತ್ವವೇ? ಆಗ ನಾನು ಉತ್ತರಿಸಿದೆ "ಭಾರತದ ಇಂದಿನ ಯುವಪೀಳಿಗೆ ಏನಾದರೂ ಸಾಧಿಸಿದ್ದರೆ ಅದರ ಹಿಂದಿನ ರಹಸ್ಯ ಇಂದಿರಾಗಾಂಧಿಯವರ ಹಲವಾರು ಯಶಸ್ವೀ ಯೋಜನೆಗಳಲ್ಲೊಂದಾದ "ನಸಬಂದಿ" ಕುಟುಂಬ ಕಲ್ಯಾಣ ಯೋಜನೆ ವಿಫಲವಾಗಿದ್ದು". "ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ" ಎಂದು ನೀವು ಯೋಚಿಸಿದರೆ ಮುಂದೆ ಓದಿ.
ಭಾರತದ ಪ್ರಥಮ ಮಹಿಳಾ ಪ್ರಧಾನಿಯಾದ ಇಂದಿರಾಗಾಂಧಿಯವರ ಸಾಧನೆ ಎಷ್ಟೆಂದರೆ, ಇಂದಿಗೂ ಕಾಂಗ್ರೆಸ್ಸಿನವರ ಪ್ರಣಾಳಿಕೆಯಲ್ಲಿ ಹೊಸ ಯೋಜನೆಗಳಿಲ್ಲ. ಆ ಸಾಧನೆಗಳಲ್ಲಿ ಪ್ರಮುಖವಾದದ್ದು, ೧೯೭೦ರ ದಶಕದಲ್ಲಿ ಜಾರಿಗೊಂಡ "ನಸಬಂದಿ" ಯೋಜನೆ. ಜನಸಂಖ್ಯಾ ಸ್ಫೋಟದ ದುಷ್ಪರಿಣಾಮ ತಡೆಯುವ ಸಲುವಾಗಿ, ನಮ್ಮ ಬುದ್ಧಿವಂತ ಅಧಿಕಾರಿಗಳು ಕಂಡುಹಿಡಿದ ಈ ಯೋಜನೆಯ ಪ್ರಕಾರ, ಸಂತಾನಹರಣಗೊಂಡ ಅಥವಾ ಅದರಲ್ಲಿ ಭಾಗವಹಿಸಲು ಮನವೊಲಿಸಿದ "ಸ್ನೇಹಿತ(?)ನಿಗೆ" ಬಹುಮಾನಗಳನ್ನು ವಿತರಿಸಲಾಗುತ್ತಿತ್ತು. ಈ ಯೋಜನೆಗೆ ಎಷ್ಟು ಒತ್ತು ಕೊಡಲಾಗಿತ್ತೆಂದರೆ, ಅದರ ಫಲಾನುಭವಿಗಳಾಗಲು ಜನರ ಮನವೊಲಿಸುವಂತೆ ಸರಕಾರಿ ಯಂತ್ರವನ್ನು ಯಥೇಚ್ಚವಾಗಿ ಬಳಸಲಾಗಿತ್ತು. ಆರಂಭದಲ್ಲಿ, ಕೆಲ ಕೊಳಚೆ ನಿವಾಸಿಗಳು ಇದರ ಲಾಭ ಪಡೆದು ಸೈಟು ಇತ್ಯಾದಿಗಳನ್ನು ಗಿಟ್ಟಿಸಿದ್ದೂ ಉಂಟು. ಆದರೆ ಈ ಯೋಜನೆ ನಿಜವಾಗಲೂ (ಕು)ಖ್ಯಾತವಾದದ್ದು ಸರಕಾರಿ ಆಸ್ಪತ್ರೆಯಲ್ಲಿ ಕೊಡುತ್ತಿದ್ದ ಬಿಡಿಗಾಸು ಹಾಗೂ "ಮರ್ಫಿ" ಟ್ರಾನ್ಸಿಸ್ಟರ್ ಗಳಿಂದ. ಈ ಯೋಜನೆ ವಿಫಲವಾದದ್ದಷ್ಟೇ ಅಲ್ಲ; ಇಂದಿರಾಗಾಂಧಿಯ ಸರಕಾರ ೧೯೭೭ರ ಚುನಾವಣೆಯಲ್ಲಿ ಉರುಳಲು ಭಾಗಶ: ಕಾರಣ ಕೂಡ ಆಗಿತ್ತು ಎಂದು ಕೇಳಿದ್ದೇನೆ. ನಂತರ ೧೯೮೦ರಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದಾಗ ಈ ಯೋಜನೆ ಕಾಂತಿ ಕಳೆದುಕೊಂಡು ಮೂಲೆಗುಂಪಾಗಿತ್ತು.
ಏನೇ ಇರಲಿ, ನಮ್ಮ ಅಧಿಕಾರಿಗಳ ಕೆಲ ಯೋಜನೆಗಳನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ. ಬುದ್ಧಿಯಿರುವ ಯಾವ ಪುರುಷ ಅಥವಾ ಸಮಾಜ ಒಂದು ರೇಡಿಯೋ ಹಾಗೂ ಪುಡಿಗಾಸಿಗಾಗಿ ನಿರ್ವೀರ್ಯರಾಗಲು ಒಪ್ಪುತ್ತಾರೆ? ಜನಸಂಖ್ಯೆ ತಡೆಗಟ್ಟಲು ಇವರಿಗೆ ಇದಕ್ಕಿಂತ ಉತ್ತಮ ಐಡಿಯಾ ಹೊಳೆಯಲಿಲ್ಲವೇ? ಸದ್ಯ, ಹಿಂದು ಧರ್ಮದ ಪ್ರಕಾರ ಪುನರ್ಜನ್ಮದ ಅವಕಾಶವಿರುವುದರಿಂದ ಈ ಯೋಜನೆಯಿಂದ ಭೂಮಿಗೆ ಬರಲಾರದ ನತದೃಷ್ಟ ಆತ್ಮಗಳು ಇನ್ನೆಲ್ಲೋ ಜನಿಸಿರಬಹುದು! ಆದರೆ ಉಳಿದವರ ಗತಿ? ನಮ್ಮ ಐಟಿ ಕಂಪೆನಿಗಳು ನೀಡುವ ಅಂಕಿ-ಅಂಶಗಳನ್ನು ಗಮನಿಸಿದರೆ ಒಂದು ವಿಷಯ ಸ್ಪಷ್ಟ, ಏನಾದರೂ ಒಂದು ವೇಳೆ ಈ ಯೋಜನೆ ನೂರರಷ್ಟು ಯಶಸ್ವಿಯಾಗಿದ್ದರೆ ನಮ್ಮ ಐಟಿ ಕಂಪೆನಿಗಳು ಬರೀ ಮ್ಯಾನೇಜರ್ ಗಳಿಂದ ತುಂಬಿರುತ್ತಿದ್ದವು, ಯಾಕೆಂದರೆ ಈ ಕಂಪೆನಿಗಳಲ್ಲಿ ಕೆಲಸ ಮಾಡುವ ಹೆಚ್ಚಿನವರ ವಯಸ್ಸು ಇಪ್ಪತ್ತೈದರಿಂದ ಮೂವತ್ತು!

- ಕನ್ನಡಿಗ

Sunday, January 22, 2006

Face To Face with Maa. Mu.

ಮಾ. ಮು. ಧರ್ಮೂದಾದಾರೊಂದಿಗೆ "ಉಗಿಬಂಡಿ" ವರದಿಗಾರನ ಸಂದರ್ಶನ

ಮೊನ್ನೆ ಜೀವರ್ಗಿಯಲ್ಲಿ ಸಂತೆಪೇಟೆಯಲ್ಲಿ ನಡೆದು ಹೋಗುತ್ತಿರುವಾಗ ಗರಡಿಮನೆ ಹತ್ರ ಒಂದು ಗೂಟದ ಬಿಳಿ ಕಾರ್ (ಅಂಬಾಸಡರ್) ನಿಂತಿತ್ತು. ಎಲಾ, ಗರಡಿಮನೆಗೂ ಕಾರಲ್ಲಿ ಬರೋ ಕಾಲ ಬಂತಾ. ಯಾರಿರಬಹುದು ಎಂದು ಕುತೂಹಲದಿಂದ ಒಳನಡೆದು ಕೇಳಿದಾಗ ತಿಳಿದಿದ್ದು; ನಮ್ಮ ಮಾ ಮು ಧರಂಸಿಂಗ್ ರವರು ಈಗ ಬೆಂಗಳೂರಿನ ಸಹವಾಸ ಬಿಟ್ಟು ಈ ಶಾಲೆ ಸೇರಿದ್ದಾರೆ. ಯಾವಾಗ ಗೌಡರು ತಮ್ಮ ರಾಜಕೀಯ ಪಟ್ಟಿನಿಂದ ಯಾಮಾರಿಸಿದರೋ ಆಗಲೇ ನಮ್ಮ ಧರಂದಾದಾ ನಿರ್ಧರಿಸಿದರು, "ದೋಸ್ತಿ ಸರಕಾರದಲ್ಲಿ ಕುಸ್ತಿ ಆಡಬೇಕಂದ್ರ ಹೊಸಾ ಪಟ್ಟು ಕಲೀಲೇ ಬೇಕು, old dog can learn new tricks ಅಂತ ಗಾದೆ ಮಾತೆ ಇರೋವಾಗ ನಾನು ಕಲಿಯೋದು ಯಾವ ಮಹಾ".
ಈ ಮಧ್ಯೆ ನಮ್ಮ "ಉಗಿಬಂಡಿ" ಸಂಪಾದಕರು ಒಂದು ವಾರದಿಂದ ಗಂಟು ಬಿದ್ದಿದ್ರು, ಏನು ಇತ್ತೀಚೆಗೆ ಬರೀತಾನೆ ಇಲ್ಲ, ಪೆನ್ನಲ್ಲಿ ಶಾಯಿ ಖರ್ಚಾಗಿದ್ಯಾ ಅಂತ. ಇಂಥಾ ಸುದ್ದಿ ಸಿಕ್ರೆ ಬಿಡೋರುಂಟಾ? ಬೇರೆ ಪೇಪರ್ನವರು ಬಂದು ಈ ಸುದ್ದಿ ಪಬ್ಲಿಶ್ ಮಾಡೋ ಮೊದಲು ನಾನೇ ಬರೆದ್ರೆ ಒಳ್ಳೇದು ಅಂತ ತೀರ್ಮಾನಿಸಿ ಒಂದು ಸಂದರ್ಶನದ ಅವಕಾಶ ಕೋರಿಯೇ ಬಿಟ್ಟೆ. ನಮ್ಮ ಧರಂದಾದ ಅವರ ದೇಹ ಎಷ್ಟು ದೊಡ್ಡದೋ ಹೃದಯವೂ ಅಷ್ಟೇ ವಿಶಾಲವಾದದ್ದು, ಇಲ್ಲ ಅನ್ನಲಿಲ್ಲ. ಸಮಸ್ಯೆ ಶುರುವಾದದ್ದೇ ಅಲ್ಲಿ, ರಾಗಿ ಮುದ್ದೆ ನಾಡಲ್ಲಿ ಬೆಳೆದ ನಂಗೆ ಜೋಳದ ರೊಟ್ಟಿ ಭಾಷೆ ಸ್ವಲ್ಪ ಕಷ್ಟ. ಆದರೆ ಕಾಕತಾಳೀಯವೆಂಬಂತೆ "ನೂರೆಂಟು ಸುಳ್ಳು" ವರದಿಗಾರ ಸಂಜಯ ಅಲ್ಲೇ ಬಂದ್ರು. ಕನ್ನಡದ ಬಹುಶೈಲಿ ಕೋವಿದರಾದ ಅವರಿಗೆ ಇದು ಸಮಸ್ಯೆಯಲ್ಲ. "ಕಾರ್ಯವಾಸಿ ಕತ್ತೆಕಾಲು ಕಟ್ಟು" ಎಂಬಂತೆ ನಾನು ವೃತ್ತಿದ್ವೇಷಗಳನ್ನು ಬದಿಗೊತ್ತಿ, ಅಚ್ಚ ಇಂಗ್ಲೀಷಲ್ಲಿ ಅವರ ಸಹಾಯ ಕೇಳಿಬಿಟ್ಟೆ. ಬೇರೆ ಭಾಷೆಯಲ್ಲಿ ಸಹಾಯ ಕೇಳಿದಾಗ ಇಲ್ಲ ಅನ್ನುವ ಕನ್ನಡಿಗರನ್ನು ನಾನು ನೋಡೇ ಇಲ್ಲ. ಓಕೆ ಅಂತ ಅಂದ್ರು ನಮ್ಮ ಸಂಜಯ.
ಸರಿ, ನಮ್ಮ ಸಂದರ್ಶನ ಶುರು ಆಯ್ತು, ಸಾಕಷ್ಟು ಮಾತುಗಳು off the record ಇದ್ವು, ಅವನ್ನೆಲ್ಲ ತೆಗೆದು ಉಳಿದ ಸಂಭಾಷಣೆಗಳನ್ನು ನಿಮಗಾಗಿ ಇಲ್ಲಿ ಪ್ರಕಟಿಸಿದ್ದೇವೆ, ಎಂಜಾಯ್ ಮಾಡಿ.
ನಾನು: ನಮ್ಮ ಮಣ್ಣಿನ ಮಗ ನಿಮ್ಮನ್ನೇ ಯಾಮಾರಿಸಿದ್ರಲ್ಲ, ಆಗ ಗುಪ್ತದಳ ಅಕ್ಕಿ ತೌಡು ಜಗೀತಾ ಇತ್ತಾ?
ಧರಂ: ಇಲ್ಲ, ಹಾಗೇನಿಲ್ಲ ನಮ್ಮ ಮಣ್ಣಿನ ಮಗನೇ ಯಾಮಾರಿದ್ದು, ನಂಗೆ ಗುಪ್ತದಳದವರು ಸುದ್ದಿ ತಂದ್ರು. ನಾನು ಈ ಮಣ್ಣಿನ ಮೊಮ್ಮಗ ಏನಾದ್ರೂ ಕಿತಾಪತಿ ಮಾಡ್ತಾನಾ ಅಂತ ಕೇಳ್ದೆ, ಆದ್ರೆ ಮಣ್ಣಿನ ಮಗ ನಂಬಲಿಲ್ಲ. ಏನೂ ಯೋಚ್ನೆ ಮಾಡಬೇಡಿ, ಸುಮ್ನೆ ಹೊಸ ವರ್ಷ ಆಚರಿಸಕ್ಕೆ ರೆಸಾರ್ಟಿಗೆ ಹೋಗಿದಾನೆ ಅಂದ್ರು. ಇರಬಹುದು, ಈಗಿನವರೇ ಹಂಗೆ, ಒಂದು ಹಬ್ಬನ ಮುಂದಿನ ವರ್ಷದವರೆಗೂ ಆಚರಿಸ್ತಾರೆ. ನೋಡಿ ನಮ್ಮ ಗಣೇಶ ಹಬ್ಬ, ರಾಜ್ಯೋತ್ಸವ ಎಲ್ಲಾ ತಿಂಗಳುಗಟ್ಟಲೆ ನಡೆಯಲ್ವಾ ಹಂಗೆ ಇವರು ನ್ಯೂ ಇಯರ್ ಆಚರಿಸ್ತಾ ಇದಾರೆ ಅಂತ ತಿಳ್ಕೊಂಡೆ.
ನಾನು: ಅದು ಸರಿ, ನೀವು ಮೊದಲೇ ಸ್ವಲ್ಪ ನೇರ ನಡೆಯವರು, ನೀವು ಹಳ್ಳಕ್ಕೆ ಬಿದ್ದಿದ್ದರಲ್ಲಿ ಆಶ್ಚರ್ಯ ಇಲ್ಲ ಬಿಡಿ, ಆದ್ರೆ ಈ ಬಿಜೆಪಿಯವರು ಎಂತಾ ಹಲ್ಕಾ ನೋಡಿ, ಬೇರೆಯವರ ಚಟ್ಟದ ಬೆಂಕೀಲಿ ಬೀಡಿ ಹಚ್ಚಕ್ಕೆ ನೋಡ್ತಾ ಇದಾರೆ.
ಧರಂ: ಛೆ, ನಂಗೆ ಬಿಜೆಪಿಯವರ ಮೇಲೆ ಬೇಸರ ಏನಿಲ್ಲ ಬಿಡಿ, ಅವರ ಸ್ಥಾನದಲ್ಲಿ ಯಾರೇ ಇದ್ರು ಹಾಗೇ ಮಾಡ್ತಿದ್ರು. ಹಂಗೆ ನೋಡಿದ್ರೆ ನಾವು ಮಣ್ಣಿನ ಮಗಂಗೆ ಪ್ರಧಾನಿಯಾಗಿದ್ದಾಗ ನಮ್ಮ ಪಕ್ಷದ ಚಿಹ್ನೆ (ಕೈ) ಕೊಟ್ಟಿರಲಿಲ್ಲ್ವಾ? ಇನ್ನು ಬಿಜೆಪಿಯವರದ್ದು ತುಂಬಾ ಕಷ್ಟ, ಅವರಿಗೆ ನಮ್ಮಂಗೆ ಚಾನ್ಸ್ ಇಲ್ಲಾ. ನಾವಾದ್ರೆ ಯಾವ ಪಕ್ಷ ಅಧಿಕಾರಕ್ಕೆ ಬಂತೋ ಅಲ್ಲಿಗೆ ಜಂಪ್ ಹೊಡಿಬಹುದು. ಉದಾಹರಣೆಗೆ ನಮ್ಮ ದೇಶಪಾಂಡೆಯವರನ್ನು ನೋಡಿ ಯಾವ ಪಾರ್ಟಿ ಅಧಿಕಾರಕ್ಕೆ ಬಂದ್ರೂ ಅವ್ರು ಮಾತ್ರ ಮಿನಿಸ್ಟರೇ. ಅವರು ವಿಧಾನಸೌಧದಲ್ಲಿ ಒಂದು ರೂಮ್ ಖಾಯಂ ಆಗಿ ರಿಸರ್ವ್ ಮಾಡಿದಾರೆ ಗೊತ್ತಾ? ನಾವು ಚುನಾವಣೇಲಿ ಮಾತ್ರ ಬೇರೆ, ಇಲ್ಲಾಂದ್ರೆ ಎಲ್ಲಾ ಜಾತ್ಯಾತೀತರೆ, ಬಿಜೆಪಿಯವರಿಗೆ ಆ ಅವಕಾಶ ಇಲ್ಲಾ ನೋಡಿ ಅದಕ್ಕೆ ಬೇಳೆ ಬೇಯಿಸ್ತಾ ಇದಾರೆ.
ನಾನು: ಒಟ್ಟಿನಲ್ಲಿ ಕಾಂಗ್ರೆಸ್ಸಿಗೆ ನಷ್ಟ ಆಯ್ತು ಬಿಡಿ
ಧರಂ: ಇಲ್ಲಿ ಪಾರ್ಟಿಗೆ ನಷ್ಟದ ಪ್ರಶ್ನೆಯೇ ಇಲ್ಲ, ಹೆಂಗಿದ್ರೂ ಇವ್ರು ಕಚ್ಚಾಡ್ತಾರೆ, ಬೇಜಾರಾಗಿ ನಮ್ಮ ಜನ ಮುಂದಿನ ಎಲೆಕ್ಶನ್ ನಲ್ಲಿ ನಮಗೇ ವೋಟು ಹಾಕೋದು. ನಿಜವಾಗಲೂ ನಷ್ಟ ಆಗಿದ್ದು ನಂಗೆ. ಯಾವಾಗ ಆ ಹೈದರಾಬಾದ್ ಬಾಬಾ ಆಶ್ರಮಕ್ಕೆ ಭೇಟಿ ಕೊಟ್ನೊ ಆ ಬಾಬಾನ ಪಾಪವೆಲ್ಲಾ ನಂಗೆ ಅಂಟುಕೊಡು ಬಿಡ್ತು. ನೋಡಿ, ಆವತ್ತು ಅವರ ಆಶೀರ್ವಾದ ತಗೊಂಡು ಕಾರು ಹತ್ತಿದ್ನೋ ಇಲ್ವೋ ಕಾರ್ ಟೈರ್ ಪಂಕ್ಚರ್. ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ಹರಕೆ ತೀರಿಸ್ದೆ. ಕಲ್ಲು ದೇವರೇ ವಾಸಿ, ತನ್ನ ಪಾಪಾನೆಲ್ಲ ಆಶೀರ್ವಾದದ ತರಾ ಕೊಡಲ್ಲ. ಎಲ್ಲಾ ನನ್ನ ಕರ್ಮ ಬಿಡಿ. ಯೋಜನಾ ಆಯೋಗದವರೂ ನಂಗೆ ವೆಲ್ ಡನ್ ಅಂತ ಹೇಳಿದ್ರು. ಆದ್ರೆ ಹೀಂಗಾಗೋಯ್ತು.
ನಾನು: ಹಾಗಾದ್ರೆ ನಿಮ್ಮ ಮುಂದಿನ ದಾರಿಯ ಯೋಚನೆ ಏನು?
ಧರಂ: ನಾನು ಮುಂಚಿಂದಲೂ ತೀರಾ ಯೋಚಿಸಿದವನೇ ಅಲ್ಲ, ಒಂಥರಾ ಕೂಲ್ ಪಾರ್ಟಿ, ನೋಡಿ ವಕೀಲನಾಗಿ ಲಾಟರಿ ಹೊಡಿಯೊಕ್ಕಿಂತ ವಾಸಿ ಅಂತ ರಾಜಕೀಯಕ್ಕೆ ಬಂದೆ, ಇಲ್ಲೇ ಮೂರು ದಶಕ ಕಳೆದು ಆಗಿದೆ. ಏನೋ, ಇಡೀ ಕರ್ನಾಟಕನೂ ಕೂಡಾ ನಮ್ ಗುಲ್ಬರ್ಗಾದ ಥರಾ ಇರ್ಲಿ ಅಂತ ನನ್ನ ಆಸೆ. ಗುಲ್ಬರ್ಗಾದ ಥರಾ ಹಿಂದಿನ ಆಚಾರ, ವಿಚಾರ ಕಾಪಾಡಿಕೊಂಡು ಬಂದಿರೋ ಜಿಲ್ಲೆಗಳು ಕಮ್ಮಿ, ಇವತ್ತಿಗೂ ಇಲ್ಲಿಯವರು ಚಕ್ಕಡಿಗಾಡಿ ಅಥವಾ ನಡೆದೇ ಓಡಾಡ್ತಾರೆ. ಕೆಲವು ಹಳ್ಳಿಗಳು ಬಸ್ಸೇ ನೋಡಿಲ್ಲ, ಎಲ್ಲಾ ಕಡೆ ಹೀಂಗೆ ಇದ್ರೆ ಭೇಸು ಇರ್ತಿತ್ತು. ಮನುಷ್ಯನ ಆಸೆಗೆ ಮಿತಿನೇ ಇರಲ್ಲ, ಇವತ್ತು ರೋಡು ಅಂತಾರೆ, ನಾಳೆ ನೀರು, ಮನೆ ಅಂತಾರೆ, ಅದಕ್ಕೆ ಹೇಳೋದು, ಯಾವುದೂ ಬೇಡ ಅಂತ ನಮ್ಮ ಹಿರಿಯರು ಮಾಡಿಟ್ಟ ಕಾಲುದಾರೀಲೇ ಇದ್ರೆ ವಾಸಿ. ನನ್ನ ಮುಂದಿನ ದಾರಿ ಸಿಂಪಲ್, ಈ ಗರಡಿ ಮನೇಲಿ ಹೊಸ ಪಟ್ಟು ಕಲೀತಿನಿ, ರೊಟ್ಟಿ ಕಡೀತೀನಿ. ಮಗಂಗೂ ಹೇಳ್ತಾ ಇದೀನಿ ವಂಶಪರಂಪರೆ ಕಾಪಾಡು, ಮಣ್ಣಿನ ಮೊಮ್ಮಗನ ಥರಾ ಅಧಿಕಾರ ತಗೋ ಅಂತ.
ನಾನು: ರಾಜಕೀಯ ನಿವೃತ್ತಿಯ ಆಲೋಚನೆ ಇದ್ಯಾ ನಿಮಗೆ?
ಧರಂ: ರಾಜಕೀಯದಿಂದ ನಿವೃತ್ತಿ? ಹಂಗಂದ್ರೆ ಹೆಂಗೆ, ರಾಜಕೀಯ ಅನ್ನೋದು ವೃತ್ತಿಯಲ್ಲ ನಿವೃತ್ತಿಯಾಗೋಕೆ. ಅದೆಲ್ಲಾ ಬೇರೆ ದೇಶಗಳಲ್ಲಿ ಇರಬಹುದು. ನಮ್ಮಲ್ಲಿ ಎಲ್ಲ ರಾಜಕಾರಣಿಗಳೂ ಸಾಯೋವರೆಗೂ ನಾಯಕರೆ; ಪೆನ್ಶನ್ ಯಾಕೆ ನಮಗೆ ಅಂತ ನಂಗೆ ಕೆಲವು ಬಾರಿ ಆಲೋಚನೆ ಬರ್ತದೆ.
ಇನ್ನೂ ಸಾಕಷ್ಟು ವಿಚಾರಗಳು ಚರ್ಚೆ ಆದವು, ಆದರೆ ಅವೆಲ್ಲಾ off the record ಆಗಿದ್ರಿಂದ ಇಲ್ಲಿ ನಾವು ಪ್ರಕಟಿಸಲಿಲ್ಲ. ನಿಮಗೆ ತಿಳಿಯುವ ಆಸಕ್ತಿ ಇದ್ದರೆ, ನಮ್ಮ ಪತ್ರಿಕಾಲಯ ಸಂಪರ್ಕಿಸಿ: http://kannadablogs.blogspot.com

- ಕನ್ನಡಿಗ