Use Baraha fonts to read this blog.. http://www.baraha.com

Friday, January 06, 2006

Iconic Villian

ಕೆಡುಕುತನದ ಐಕಾನ್ "ವಜ್ರಮುನಿ" ಇನ್ನಿಲ್ಲ

ವಜ್ರಮುನಿ ಕನ್ನಡ ಚಿತ್ರಗಳಲ್ಲಿ ಮೆರೆಯುವ ಕಾಲದಲ್ಲಿ ನಾನಿನ್ನೂ ಪ್ರೈಮರಿ ಸ್ಕೂಲಲ್ಲಿದ್ದೆ. ಸಿನಿಮಾ ಹುಚ್ಚು ಭರ್ಜರಿಯಾಗಿತ್ತು, ಬಹುಶ: ಬೇರೆ ಮನರಂಜನಾ ಮಾರ್ಗವೂ ಇರಲಿಲ್ಲ. ಸರಿ ಸುಮಾರಾಗಿ ಬಿಡುಗಡೆಯಾದ ಕನ್ನಡ ಸಿನಿಮಾಗಳೆಲ್ಲವನ್ನೂ ಅವಕಾಶ ದೊರೆತಾಗ ನೋಡುತ್ತಿದ್ದೆ. ಸುಮಾರು ಎಲ್ಲ ಚಿತ್ರಗಳಲ್ಲೂ ವಜ್ರಮುನಿಯೇ ವಿಲನ್. ನಾನೂ ಕೂಡ ಚಿಕ್ಕ ಹುಡುಗನಾಗಿದ್ದರೂ ಇತರ ಸಹಪಾಠಿಗಳಂತೆ ನನಗೆ ವಜ್ರಮುನಿಯ ಭಯವಿರಲಿಲ್ಲ. ಮೊದಲ ಕೆಲ ರೀಲುಗಳಲ್ಲಿ ಆರ್ಭಟ ಮೆರೆದರೂ ಕೊನೇ ರೀಲ್ ಹೊತ್ತಿಗೆ ಚಚ್ಚಿ ಸರಿದಾರಿಗೆ ತರಲು ರಾಜಕುಮಾರ್, ಅಂಬರೀಶ್, ವಿಷ್ಣುವರ್ಧನ್ ಮೊದಲಾದವರಿದ್ದರು ಎನ್ನುವ ನಂಬಿಕೆಯಿತ್ತು. ನಮ್ಮ ನಿರ್ದೇಶಕರು ಕೂಡಾ ನನ್ನ ನಂಬಿಕೆ ಹುಸಿಗೊಳಿಸಲಿಲ್ಲ, ಅವರಿಗೆ ನಾನು ಆಭಾರಿಯಾಗಿದ್ದೇನೆ.
ಎರಡು ದಿನಗಳ ಹಿಂದೆ ನಮ್ಮ ದಿಗ್ಗಜ ಖಳನಾಯಕರಲ್ಲೊಬ್ಬರಾಗಿದ್ದ ವಜ್ರಮುನಿ ಕಣ್ಮರೆಯಾದರು. ಇದರ ಬಗ್ಗೆ ಎಲ್ಲಾ ಕನ್ನಡ ಪತ್ರಿಕೆಗಳು ವರದಿ ಮಾಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಗಮನ ಸೆಳೆದದ್ದು ಕನ್ನಡಪ್ರಭದ ಸಂಪಾದಕೀಯದಲ್ಲಿ "ಹತ್ವಾರ್" ಬರೆದ ಅಂಕಣ. ಅದರ ಲಿಂಕ್ ಇಲ್ಲಿದೆ:ಕನ್ನಡಪ್ರಭದ ಅಂಕಣ
ವಜ್ರಮುನಿಯವರ ಮರಣದೊಂದಿಗೆ, ಕೆಡುಕುತನದ ಐಕಾನ್ ಕೂಡಾ ಕಣ್ಮರೆಯಾಯಿತು ಎನ್ನುವ ವಾಕ್ಯ ನನ್ನ ಗಮನ ಸೆಳೆದದ್ದಷ್ಟೇ ಅಲ್ಲ, ಕೆಲ ಕಾಲ ವಿಚಾರಕ್ಕೀಡು ಮಾಡಿತು. ಮುಂದಿನ ಕೆಲ ಬ್ಲಾಗ್ ಗಳಲ್ಲಿ ನಮ್ಮ ರಾಜಕಾರಣಿಗಳು ಹೇಗೆ ಕೆಡುಕುತನದ ಐಕಾನ್ ಆಗಿ ಹೊರಹೊಮ್ಮಿದ್ದಾರೆ ಎಂದು ನೋಡೋಣ.
- ಕನ್ನಡಿಗ

Monday, January 02, 2006

Desha Bhaashe

ಕನ್ನಡದಲ್ಲಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ಪ್ರಯತ್ನ : ಧರಂಸಿಂಗ್

ಇದು ಕೆಲದಿನಗಳಿಂದ ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟವಾಗಿರುವ ಸುದ್ದಿ. ನಿಜ, ಧರಂಸಿಂಗ್ ಅಲ್ಲದೇ ಬೇರಿನ್ನಾರು ಇಂಥ ಹೇಳಿಕೆ ಕೊಡಲು ಸಾಧ್ಯ. ಸುಮಾರು ಮೂರು ದಶಕಗಳ ರಾಜಕಾರಣ ಮಾಡಿ ಕಡಿದು ಇಟ್ಟಿರುವ ಸಾಧನೆ ನೋಡಿದರೆ ಇದೂ ಕೂಡಾ ಅವರ ಸಾಧನಾ ಪಟ್ಟಿ ಸೇರುವುದರಲ್ಲಿ ಸಂದೇಹವೇ ಇಲ್ಲ. ಹೋಗಲಿ, ಈ ಹೇಳಿಕೆಯನ್ನು ಗಂಭೀರವಾಗಿ ವಿಚಾರಿಸಿ ನೋಡಿದರೂ ಕೂಡಾ ಇದೊಂದು ಅಪ್ರಯೋಜಕ ಕೆಲಸ ಎಂದು ಅನಾಯಾಸವಾಗಿ ಹೇಳಬಹುದು. ಸುಮ್ಮನೆ ಕೂತು ವಿಚಾರಿಸಿ: ಈ ಇಂಜಿನೀಯರುಗಳು ಮಾಡುವ ಕೆಲಸ ಏನು? ಬಹುಪಾಲು ಖಾಸಗಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಗಾಣದೆತ್ತಿನಂತೆ ದುಡಿಯುವುದು. ಅವರ ದಿನನಿತ್ಯದ ಕೆಲಸದಲ್ಲಿ ಹರಟೆ (ವಿಚಾರ ವಿನಿಮಯ?) ಅಥವಾ ಕೆಲ ಇ-ಮೇಲ್ ಬಿಟ್ಟರೆ ಕನ್ನಡದ ಬಳಕೆ ಅಷ್ಟಕ್ಕಷ್ಟೇ. ಇರಲಿ, ಅವರ ಮುಂದಿನ ಶಿಕ್ಷಣಕ್ಕೆ ಕನ್ನಡ ಮಾಧ್ಯಮ ದಾರಿಯಾದೀತೆ? ಖಂಡಿತಾ ಇಲ್ಲ. ಇತಿಹಾಸ ನಮಗೆ ಏನಾದರೂ ಪಾಠ ಕಲಿಸಿದ್ದರೆ ಇದೂ ಕೂಡಾ ನಮ್ಮ "ಗರೀಬಿ ಹಠಾವೋ"ದಂಥ ಘೋಷಣಾಮಾತ್ರ ಸಾಧನೆಯಾಗುವುದು ಶತಃಸಿದ್ಧ.
ಇನ್ನು ಕೆಲ ಅಭಿಮಾನಿ ಕನ್ನಡಿಗರು ಯುರೋಪಿನಂತ ಅಥವಾ ಜರ್ಮನ್ನರ ವ್ಯವಸ್ಥೆಯ ಉದಾಹರಣೆ ಕೊಟ್ಟು ವಾದ ಮಂಡಿಸಬಹುದು, ಆದರೆ ನೆನಪಿರಲಿ: ಅವು ರಾಷ್ಠ್ರೀಯ ಭಾಷೆಗಳು, ಆ ನಿಟ್ಟಿನಲ್ಲಿ ಭಾರತದ ಪ್ರತಿ ರಾಜ್ಯವೂ ತನ್ನದೇ ಭಾಷೆಯ ಶಿಕ್ಷಣ ಹೇರಿದರೆ ಪರಿಸ್ಥಿತಿಯೇನಾದೀತು. ಈಗಲೇ ಸಾವಿರ ಪ್ರವೇಶ ಪರೀಕ್ಷೆ ಬರೆಯುತ್ತಿರುವ ನಮ್ಮ ವಿದ್ಯಾರ್ಥಿಗಳ ಗತಿ? ಅಂಥ ಅಭಿಮಾನವಿದ್ದರೆ ದೇಶಕ್ಕೊಂದು ಭಾಷೆ ಅಂದರೆ ಸ್ವಲ್ಪ ಮಟ್ಟಿಗಾದರೂ ಊಹಿಸಬಹುದು. ಅದಕ್ಕಿಂತ ಮೊದಲು ನಮ್ಮ ಘನ ಸರ್ಕಾರದ ಆಡಳಿತ ಭಾಷೆ ಯಾವುದು? ಮೊದಲು ಈ ಅಧಿಕಾರಿ ವರ್ಗಕ್ಕೆ ಕನ್ನಡ ಕಲಿಸುವ ವ್ಯವಸ್ಥೆಯಾಗಬೇಡವೇ?
ನನಗೆ ಗೊತ್ತು, ಈ ಥರ ಬರೆಯುವುದರಿಂದ ಹಲವು ಕನ್ನಡ ಸಂಘಗಳ ಕೆಂಗಣ್ಣಿಗೆ ಗುರಿಯಾಗುವುದಕ್ಕಿಂತ ನನಗೆ ಹೆಚ್ಚಿನ ಗಳಿಕೆಯೇನಿಲ್ಲ. ಆದರೂ ಒಂದು ಆಶಯ: ಕನಿಷ್ಠ ನೀರು, ಉತ್ತಮ ವಸತಿ ಸೌಲಭ್ಯ, ಶುಧ್ದ ಗಾಳಿ ಭಾಷೆಗಿಂತ ಪ್ರಮುಖ ಆದ್ಯತೆಯಾಗಬೇಡವೇ? ಸುಮ್ಮನೇ ಹೇಳಿಕೆ ಕೊಟ್ಟು ಕೂರುವ ಬುದ್ಧಿ ನಮ್ಮ ರಾಜಕಾರಣಿಗಳನ್ನು ಯಾವಾಗ ಬಿಡುವುದೋ ಗೊತ್ತಿಲ್ಲ.

- ಕನ್ನಡಿಗ