Use Baraha fonts to read this blog.. http://www.baraha.com

Thursday, November 23, 2006

ಬೆಂಗಳೂರು - ಬ್ಯಾಂಗಲೋರ್ ಆದರೇನು ಬೆಂದಕಾಳೂರಾದರೇನು?

ಎಲ್ಲೋ ಓದಿದ ನೆನಪು; ಡಾ ರಾಜಕುಮಾರ್ ಅವರನ್ನು ಸಂದರ್ಶಿಸುತ್ತಾ ಆಂಗ್ಲ ಪತ್ರಿಕೆಯ ವರದಿಗಾರರೊಬ್ಬರು "ನೀವೇಕೆ ಬೇರೆ ಭಾಷೆಯಲ್ಲಿ ಉತ್ತರಿಸುವುದಿಲ್ಲ, ನಟಿಸುವುದಿಲ್ಲ" ಎಂದು ಕೇಳಿದಾಗ ಡಾ. ರಾ. ಉತ್ತರಿಸಿದರಂತೆ "ಇಲ್ಲಪ್ಪಾ ನನಗೆ ಬೇರೆ ಭಾಷೆಗಳಾವುದೂ ಬರುವುದಿಲ್ಲ ಕನ್ನಡ ಮಾತ್ರ ಗೊತ್ತು".
ಈ ಮಾತು ಡಾ. ರಾ ಅವರಿಗೆ ಮಾತ್ರವಲ್ಲ ನಮ್ಮಂಥ ಕೆಲ ಕೋಟಿ ಕನ್ನಡಿಗರಿಗೂ ಅನ್ವಯವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ, ಹಳ್ಳಿಯ ಪರಿಸರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನನಗಂತೂ ಇಂಜಿನೀಯರಿಂಗ್ ಪದವಿ ಮುಗಿಯುವವರೆಗೂ ಇಂಗ್ಲಿಷ್ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಇವತ್ತಿಗೂ ನನ್ನ ವಿಚಾರ, ಲೆಕ್ಕಗಳು ಮನದಾಳದಲ್ಲಿ ಕನ್ನಡದಲ್ಲೇ ನಡೆದು ನಾಲಿಗೆಯಿಂದ ಹೊರಬರುವಾಗ ತುರ್ಜುಮೆಗೊಳ್ಳಬೇಕಷ್ಟೆ. ಪರಿಸ್ಥಿತಿ ಹೀಗಿರುವಾಗ ಹಲವು ಬಾರಿ ನನ್ನ ಬೆಂಗಳೂರು ಮಿತ್ರರೊಡನೆ ಮಾತನಾಡುವಾಗ ಕನ್ನಡ ಗ್ರಾಮ್ಯ ಭಾಷೆಯ ಕೆಲ ಶಬ್ದಗಳು ಬಂದೇ ಬರುತ್ತವೆ. ನಾನು ಗಮನಿಸಿದಂತೆ ಬೆಂಗಳೂರಲ್ಲಿ ಹುಟ್ಟಿ ಬೆಳೆದ ಕನ್ನಡಿಗರಿಗಷ್ಟೇ ಶುದ್ಧ ಕನ್ನಡ ಶಬ್ದಗಳಿಂದ ತೊಂದರೆಯಾಗುವುದು; ಉಳಿದವರಿಗೆ ಅರ್ಥವಾಗದ ಪರಿಸ್ಥಿತಿಯೇನಿಲ್ಲ. ವಾಸ್ತವವಾಗಿ ನೋಡಿದರೆ ಈ ಪರಿಸ್ಥಿತಿ ಕರ್ನಾಟಕದಲ್ಲಿ ಮುಂಚಿನಿಂದಲೂ ಇದೆ; ಇದು ಐಟಿ, ಬಿಟಿಗಳಿಂದಾದ ಬದಲಾವಣೆಯೇನಲ್ಲ. ಐಟಿ, ಬಿಟಿಗಳಿಂದ ಇದು ಸರ್ವರಿಗೂ ಗೋಚರಿಸತೊಡಗಿದೆ; ಮಾಧ್ಯಮಗಳಲ್ಲಿ ಮೊದಲಿಗಿಂತಲೂ ಹೆಚ್ಚು ಚರ್ಚೆಯಾಗುತ್ತಿದೆ. ಸಹಜವಾಗಿಯೇ ಮಾಧ್ಯಮಗಳ ಚರ್ಚೆ ಸರ್ಕಾರದ ಮೇಲೆ ಒತ್ತಡ ಹೇರುವುದಲ್ಲದೆ, ಸರ್ಕಾರದ ಗಮನವನ್ನು ಹೆಸರು ಬದಲಾವಣೆಯಂಥ ಕ್ಷುಲ್ಲಕ ಕಾರ್ಯಗಳೆಡೆಗೆ ಸೆಳೆಯುತ್ತದೆ. ಇದರ ಪರಿಣಾಮವಿಷ್ಟೇ; ಮೂಲಭೂತ ಸೌಕರ್ಯಗಳ ಅವಶ್ಯಕತೆ ಹಾಗೂ ಅಭಿವೃದ್ಧಿಯೆಡೆಗೆ ಗಮನ ಹರಿಸದೇ ನಮ್ಮ ಚುನಾಯಿತ ಸದಸ್ಯರು ಅವಧಿ ಕಳೆದು ಮುಂದಿನ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ದಿನವೂ ಕುಡಿಯುವ ನೀರಿಗೆ ಸರತಿ ನಿಲ್ಲುವ ಬೊಮ್ಮನಹಳ್ಳಿಯ ಜನರ ಸಾಲು ಉದ್ದವಾಗುತ್ತದೆ.
ಸ್ಥಳನಾಮ ಬದಲಾವಣೆಯ ಮೂಲ ಉದ್ದೇಶ ಜನಜಾಗೃತಿ ಮೂಡಿಸುವುದು ಹಾಗೂ ಅಪಭೃಂಶಗೊಂಡ ಮೂಲನಾಮವನ್ನು ತಿದ್ದುವುದು ಎಂದು ಒಪ್ಪಬಹುದಾದರೂ, ನಾವಿರುವ ಪರಿಸ್ಥಿತಿಯಲ್ಲಿ ಪ್ರತಿ ಕಾರ್ಯದ ಆದ್ಯತೆ ನೋಡುವುದು ಅವಶ್ಯಕ. ಒಂದು ಸರಳ ಲೆಖ್ಖ: ಬೆಂಗಳೂರಿನಲ್ಲಿ ಸುಮಾರು ಒಂದು ಲಕ್ಷ ಐಟಿ ನೌಕರರಿದ್ದರೆ, ದಿನದ ಟ್ರಾಫಿಕ್ ಜಾಮಿನಿಂದ ಆಗುವ ನಷ್ಟದಲ್ಲಿ ಬರೀ ಹತ್ತು ನಿಮಿಷಗಳ ಉಳಿತಾಯವಾದರೂ ೧೦೦೦೦೦ * ೧೦ = ೧೦೦೦೦೦೦ / ೬೦ = ೧೬೬೬೬.೬೬ ಘಂಟೆಗಳು ಅಂದರೆ ಸುಮಾರು ೬೯೫ ದಿನಗಳು ಅಥವಾ ಸುಮಾರು ಎರಡು ವರುಷಗಳ ಉಳಿತಾಯ. ಜೀವನದ ಉನ್ನತಿಯ ಹಂತದಲ್ಲಿರುವ ನಮ್ಮ ಪ್ರಜೆಗಳ ಎರಡು ವರುಷಗಳನ್ನು ಪ್ರತೀದಿನ ಬರೀ ಹತ್ತು ನಿಮಿಷಗಳ ಟ್ರಾಫಿಕ್ ಜಾಮಿನಲ್ಲಿ ಉಳಿಸಬಹುದಾದರೆ, ಇತರೆ ಎಲ್ಲಾ ಉದ್ಯಮಗಳು, ಇಂಧನ, ಮಾಲಿನ್ಯಗಳ ಉಳಿತಾಯವನ್ನು ನೀವೇ ಊಹಿಸಿ. ಇಂಥ ಸಂದರ್ಭದಲ್ಲಿ ನಮ್ಮ ಸರ್ಕಾರ ಮತ್ತು ಅದರ ಅಧಿಕಾರವರ್ಗ ಮೂಲ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕೋ ಅಥವಾ ಕಡ್ಲೆಕಾಯಿ ಪರಿಷೆಯ ಉದ್ಘಾಟನೆ, ಮೈಸೂರಿನಲ್ಲಿ ಚುನಾವಣೆ, ಬೆಂಗಳೂರಿನ ಸ್ಥಳನಾಮ ಬದಲಾವಣೆ ಮುಖ್ಯವೋ? ನಮ್ಮನ್ನು ನೂರಾರು ವರುಷ ಆಳಿದ ಆಂಗ್ಲರು ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ಈಗ ನಾವು ಅವುಗಳನ್ನು ಹುಡುಕಿ ಚರ್ಚಿಸುವುದು ಅನವಶ್ಯಕ. ಮುಂದೊಂದು ಕಾಲದಲ್ಲಿ ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಚರ್ಚಿಸಲು ಬೇರೇನೂ ಇಲ್ಲವಾದರೆ ಈ ಕೆಲಸಗಳನ್ನು ಮಾಡಬಹುದು.
ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ಕಾರವನ್ನು ನಮ್ಮ ಅನುಕೂಲಕ್ಕನುಗುಣವಾಗಿ ದುಡಿಸಿಕೊಳ್ಳುವುದೂ ಒಂದು ಕಲೆ. ಅದು ಪ್ರಜಾಪ್ರಭುತ್ವದ ಆಶಯ ಕೂಡಾ; ಅದಿಲ್ಲದೇ ಸರ್ಕಾರ ತನಗಿಷ್ಟವಾದ ನಿರ್ಧಾರ ತೆಗೆದುಕೊಳ್ಳುತ್ತಾ, ಮನಬಂದಂತೇ ಆಡಳಿತ ನಡೆಸಿದರೆ ಕಮ್ಯೂನಿಸಂಗೂ ಪ್ರಜಾಪ್ರಭುತ್ವಕ್ಕೂ ವ್ಯತ್ಯಾಸವೇನು? ಅದೇ ನಿಟ್ಟಿನಲ್ಲಿ ನಮ್ಮ ಮಾಧ್ಯಮಗಳೂ ಕಾರ್ಯಪ್ರವೃತ್ತವಾದರೆ ಅನುಕೂಲ. ಜನ ಸಮಸ್ಯೆಗಳೆಡೆಗೆ ಸರ್ಕಾರದ ಗಮನ ಸೆಳೆಯಿರಿ, ಕುಂದುಕೊರತೆಗಳನ್ನು ಪ್ರಚಾರ ಪಡಿಸಿ, ಪ್ರಜೆಗಳ ಅಮೂಲ್ಯ ಕಾಲವನ್ನು ಉಳಿಸಿ. ಇದೇ ನನ್ನ ಆಶಯ.

- ಕನ್ನಡಿಗ

7 comments:

Vikas said...

sariyagi heliddira.

-Vikas Kamat

DR. M.R.Vijayashankar said...

neevu sariyaagi helalilla. nimmadu vitanda vaada. hesarigu belavanigegu talaku haakuvudu tappu. hesare sariyagi heladiddare nimma aidentity elli hoyitu.tappu tappu hesaru heluvudu nimma astitvavanne prashnisidante. bengaluru bengaluru maatra aagirabeku innenaadaru adu bengaluralla.
metikurke

Kannadiga said...

ಡಾ. ವಿಜಯಶಂಕರ್ ಅವರೆ,
ಈ ಅಂಕಣ ಹಲವಾರು ಜನರಿಗೆ ಪಥ್ಯವಾಗಿಲ್ಲ. ಬಹುಶ: ನಾನು ನನ್ನ ಅಭಿಪ್ರಾಯವನ್ನು ಸರಿಯಾಗಿ ಮಂಡಿಸಲಿಲ್ಲ ಎನಿಸುತ್ತದೆ. ಇಲ್ಲಿನ ಚರ್ಚೆಯ ಉದ್ದೇಶ ಬೆಳವಣಿಗೆ ಹಾಗೂ ಭಾಷೆಗೆ ತಳುಕು ಹಾಕುವುದಲ್ಲ; ಬದಲಾಗಿ ಸರ್ಕಾರಿ ಯಂತ್ರವನ್ನು ವಿವೇಚನೆಯಿಲ್ಲದೇ ಬಳಸುವುದನ್ನು ಖಂಡಿಸುವುದು. ನಮ್ಮ ದೇಶ ನೂರಾರು ವರುಷಗಳ ಕಾಲ ಆಂಗ್ಲರಿಂದ ಆಳ್ವಿಕೆಗೆ ಒಳಪಟ್ಟಿದೆ. ಅದಕ್ಕೂ ಹಿಂದೆ ಸತತವಾಗಿ ಅರಬ್ಬರಿಂದ ದಾಳಿಗೊಳಗಾಗಿದೆ. ಸಹಜವಾಗಿಯೇ ನಮ್ಮ ನಿತ್ಯಜೀವನದಲ್ಲಿ ಆಂಗ್ಲ ಮತ್ತು ಮಧ್ಯಪ್ರಾಚ್ಯ ಭಾಷೆ ಹಾಗೂ ಸಂಸ್ಕೃತಿಯ ಪ್ರಭಾವ ಇದ್ದೇ ಇದೆ. ಇಂತಹ ಸನ್ನಿವೇಶದಲ್ಲಿ, ನಾವು ಬಾಂಬೆ, ಮದ್ರಾಸ್ ಎಂದು ಕರೆಯಲ್ಪಟ್ಟ ನಮ್ಮ ನಗರಗಳ ನಾಮ ಬದಲಾವಣೆ ಮಾಡಿ ಸಾಧಿಸುವುದಾದರೂ ಏನು? ಹಾಗೊಂದು ವೇಳೆ ಬಯಸಿದರೂ ಕೂಡಾ, ನಾಮ ಬದಲಾವಣೆ ಬರೀ ಆಂಗ್ಲರಿಂದ ಕರೆಯಲ್ಪಟ್ಟ ಸ್ಥಳಗಳಿಗೆ ಸೀಮಿತವೇಕೆ? ಸುಲ್ತಾನಪಾಳ್ಯವನ್ನು ಅಯ್ಯಪ್ಪ ನಗರ ಎಂದೋ, ಅಹಮದ್ ನಗರವನ್ನು ಅಲಕಾನಗರ ಎಂದೋ ಏಕೆ ಬದಲಾಯಿಸಬಾರದು? ಇದು ವಿತಂಡ ವಾದವಲ್ಲ, ಈ ಥರ ಸ್ಥಳನಾಮ ಬದಲಾವಣೆಯ ಕಾರ್ಯದಲ್ಲಿ ಹುರುಳಿಲ್ಲ, ಅದೊಂದು ಕೊನೆಯಿಲ್ಲದ ಅಧ್ಯಾಯ ಎಂದು ಅರಿಯಬೇಕು ಎಂದು ನನ್ನ ಅಭಿಪ್ರಾಯ.
ಅಷ್ಟೇ ಅಲ್ಲ, ನನ್ನ ಮದ್ರಾಸಿಗ ಮಿತ್ರರು ಇಂದಿಗೂ ಚೆನ್ನೈಯನ್ನು ಮದ್ರಾಸು ಎಂದೇ ಬಳಸುತ್ತಾರೆ. ನಾವಂತೂ ಬೆಂಗಳೂರನ್ನು ಬ್ಯಾಂಗಲೋರ್ ಎಂದು ಯಾವತ್ತಿಗೂ ಕರೆದಿಲ್ಲ. ಒಟ್ಟಾರೆ ಸ್ಥಳನಾಮ ಬದಲಾವಣೆಯಂತಹ ವ್ಯರ್ಥ ಚಟುವಟಿಕೆಯೆಡೆ ಗಮನ ಹರಿಸದೇ ಜನರ ದಿನಚರಿಗೆ ಅನುಕೂಲವಾಗುವಂಥ ಕಾರ್ಯಗಳೆಡೆ ನಾವು ಗಮನ ಹರಿಸಬೇಕು ಎಂಬುದು ನನ್ನ ಹಾರೈಕೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಕಾಲಾವಕಾಶ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು.


- ಕನ್ನಡಿಗ

ಶ್ವೇತ said...

ಕನ್ನಡಿಗ ಅವರೆ, ಏನ್ ಗುರು ಬ್ಲಾಗ್ ದಲ್ಲಿ ಈ ವಿಶಯವಾಗಿ ಒಳ್ಳೇಯ ಲೇಖನ ಬಂದಿದೆ. ಓದಿ ನಿಮ್ಮ ಅನಿಸಿಕೆ ತಿಳಿಸಿ.

http://enguru.blogspot.com/2007/08/blog-post_28.html

Anonymous said...

ಏನ್ರೀ ನಿಮ್ಮ ಗೋಳು? ಯಾಕ್ರಿ ಇಂತಾ ತಲಹರಟೆ ಮಾಡ್ತೀರ? ಈ pseudo-ಬುದ್ಧಿವಂತಿಕೆ ಯಾಕ್ರೀ ನಿಮಗೆ?

ನಾನು ನೋಡಿರೋ ಹಾಗೆ ನನ್ನ ಗೆಳೆಯರ ಬಳಗದಲ್ಲಿ, ಪರಿಚಯಸ್ತರಲ್ಲಿ, ಬ್ಲಾಗ್ ಬರಹಗಳಲ್ಲಿ (ಈ ಬ್ಲಾಗ್ ಒಂದನ್ನು ಬಿಟ್ಟು), ಆರ್ಕೂಟ್ ನಲ್ಲಿ ಎಲ್ಲ ಕನ್ನಡಿಗರೂ ಇದನ್ನ ಒಪ್ಪಿಕೊಂಡಿದ್ದಾರೆ. ಕನ್ನಡ ಪತ್ರಿಕೆಗಳೂ ಇದನ್ನ ಸ್ವಾಗತಿಸಿವೆ. TOI, DH ಮುಂತಾದ ಇಂಗಲೀಶಿನ ಪತ್ರಿಕೆಗಳಲ್ಲಿ ಮಾತ್ರ ಕನ್ನಡದವರಲ್ಲದವರು ಇದಕ್ಕೆ ಎದುರು ದನಿ ಎತ್ತಿದ್ದಾರೆ.

ಕನ್ನಡಿಗ - Bengaluru said...

"ಮನಬಂದಂತೇ ಆಡಳಿತ ನಡೆಸಿದರೆ ಕಮ್ಯೂನಿಸಂಗೂ ಪ್ರಜಾಪ್ರಭುತ್ವಕ್ಕೂ ವ್ಯತ್ಯಾಸವೇನು?"

ಹೆಸರಿನ ವಿಚಾರ ಹಾಗಿರಲಿ, ಮೊದಲು ಕಮ್ಯೂನಿಸಂ ಗೂ ಡಿಕ್ಟೇಟರ್‍ಶಿಪ್‍ಗೂ ಇರುವ ವ್ಯತ್ಯಾಸ ತಿಳ್ಕಳಿ. ಸುಮ್ಮನೆ ಟೈಪ್ ಹೊಡೆಯಕ್ಕೆ ಬರತ್ತೆ ಅಂತ ತಲೆಗೆ ಬಂದಿದ್ದನ್ನೆಲ್ಲ ಬರೆಯಬೇಡಿ.

ಮುತ್ತುಮಣಿ said...

ಕನ್ನಡಿಗ ಅವರು ಸರಿಯಾದ ವಿಷಯವನ್ನೇ ಹೇಳಿದ್ದಾರೆ. ನಮ್ಮ ರಾಜಕಾರಣಿಗಳ ರೀತಿ ಮೂಗಿಗೆ ಬೆಣ್ಣೆ ಸವರುವ, ಬೆಟ್ಟ ಅಗೆದು ಇಲಿ ಹಿಡಿಯುವಂತದ್ದು, ಅದನ್ನು ಸರಿಯಾಗಿಯೆ ಬಿಂಬಿಸಿದ್ದಾರೆ.
ಈ ಹೆಸರು ಬದಲಾಯಿಸುವುದು ಇವೆಲ್ಲಾ ಅವರು ಮಾಡೂವ ಗಿಮಿಕ್ಕು ತಾನೆ? ಒಂದು ವೇಳೆ ಎಲ್ಲ ಹೆಸರನ್ನು ಬದಲಾಯಿಸುತ್ತೀನಿ ಅಂತ ಕೂತರೆ ಸಮಯ ವ್ಯರ್ಥವಾಗುವುದು ಯಾರದು ಹೇಳಿ? ಆದರೆ, ನಾನು ನೋಡಿದಂತೆ ಈ ಬ್ಲಾಗನ್ನು ಅರ್ಥಮಾಡಿಕೊಳ್ಳುವುದರಲ್ಲಿ ಪ್ರೀಜುಡಿಸ್ ಕಾಣಿಸ್ತಿದೆ.
ನಮ್ಮ ನೆಲ ಜಲದ ಬಗ್ಗೆ ಅಷ್ಟೊಂದು ಅಭಿಮಾನವಿದ್ದರೆ ರಾಜಕಾರಣಿಗಳು ಜನಕ್ಕೆ ಉಪಯೋಗವಾಗುವ ಕೆಲಸವನ್ನೇಕೆ ಮಾಡಬಾರದು?