
"ಅಕ್ಕ"ಳ ಆಹ್ವಾನ ಸ್ವೀಕರಿಸಿ ಬಾಲ್ಟಿಮೋರ್ ಅಧಿವೇಶನಕ್ಕೆ ಆಗಮಿಸಿದ್ದ ಕೆರೆಮನೆ ಯಕ್ಷಗಾನ ತಂಡವು ಅಭಿಮಾನಿಗಳ ಕೋರಿಕೆಯ ಮೇರೆಗೆ ತಿರುಗಾಟ ಪ್ರದರ್ಶನ ಆರಂಭಿಸಿ ಅಮೇರಿಕೆಯ ಪೂರ್ವ ತೀರದ ಉದ್ದಗಲಕ್ಕೂ ಹದಿನೈದಕ್ಕೂ ಮಿಕ್ಕಿದ ಪ್ರದರ್ಶನ ನೀಡಿ, ಅಂತಿಮ ಪ್ರಸಂಗವನ್ನು ನ್ಯೂಜೆರ್ಸಿಯಲ್ಲಿ ಅಕ್ಟೋಬರ್ ಇಪ್ಪತ್ತೆರಡರಂದು ನಡೆಸಿತು. ಹಿಂದಿನ ದಿನವಷ್ಟೇ ನ್ಯೂಯಾರ್ಕನಲ್ಲಿ ತುಂಬಿದ ಸಭಾಂಗಣದಲ್ಲಿ "ಜರಾಸಂಧ ವಧೆ"ಯ ಪ್ರಸಂಗದಲ್ಲಿ ಮನ ಸೆಳೆದಿದ್ದ ಶಂಭು ಹೆಗಡೆ ಹಾಗೂ ಶಿವಾನಂದ ಹೆಗಡೆಯವರು ಜನಪ್ರಿಯ "ಗದಾಯುದ್ಧ"ಯ ಮೂಲಕ ಯಶಸ್ವೀ ತಿರುಗಾಟಕ್ಕೆ ಅಂತಿಮ ತೆರೆ ಎಳೆದರು.
ರಾಷ್ಟ್ರ ಪ್ರಶಸ್ತಿ ವಿಜೇತ ಶಂಭು ಹೆಗಡೆಯವರ ಕೌರವನ ಪಾತ್ರ ಪ್ರತಿಯೊಬ್ಬ ಯಕ್ಷಗಾನಾಸಕ್ತ ವಿದ್ಯಾರ್ಥಿಗೆ ರಸಾಭಿವ್ಯಕ್ತಿಯ ಪಾಠದಂತೆ. ಕುರುಕ್ಷೇತ್ರ ಯುದ್ಧದ ಅಂತ್ಯದಲ್ಲಿ ಸಂಪತ್ತು, ಬಂಧುಗಳು, ರಾಜ್ಯ, ಅಧಿಕಾರ ಭೃಷ್ಠನಾಗಿ ಪರಿತಪಿಸುತ್ತಾ ಅಲೆಯುವ ಕೌರವನ ಪಾತ್ರದ ಚಿತ್ರಣ ಎಂಥ ಕಲಾವಿದನಿಗೂ ಸವಾಲೇ ಸರಿ. ಶೋಕರಸಕ್ಕೆ ತನ್ನದೇ ಆದ ಭಾಷ್ಯ ಬರೆದಿರುವ ಶಂಭು ಹೆಗಡೆಯವರು, ಯುದ್ಧಭೂಮಿಯಲ್ಲಿ ರಾಶಿ ಬಿದ್ದಿದ್ದ ತನ್ನವರ ಕಳೇಬರವನ್ನು ನೋಡಿ ವಿಲಾಪಿಸುತ್ತ "ಕುರುರಾಯನಿದನೆಲ್ಲ ಕಂಡು.." ಪದ್ಯಕ್ಕೆ ನರ್ತಿಸಿದಾಗ ಅದನ್ನು ಸ್ವತ: ಅನುಭವಿಸಿದಂತೆ ಸಭೆಯಲ್ಲೆಲ್ಲ ಮೌನ ಆವರಿಸಿತ್ತು. ನೆಬ್ಬೂರರ ಕಂಚಿನ ಕಂಠದಿಂದ ಝಂಪೆ ತಾಳದಲ್ಲಿ ಬಂದ ಆ ಪದ್ಯ, ಪ್ರಸಂಗ ಮುಗಿದ ಎಷ್ಟೋ ಘಂಟೆಗಳ ಬಳಿಕವೂ ನನ್ನನ್ನು ಕಾಡುತ್ತಿತ್ತು. ರಂಗದ ಮೇಲೆ ಮಾತುಗಾರಿಕೆಗೆ ಹೆಸರುವಾಸಿಯಾಗಿರುವ ಶಂಭು ಹೆಗಡೆಯವರ ವಾಕ್ಪಟುತ್ವದ ಒಂದು ಉದಾಹರಣೆ ನೋಡಿ:
ಜರಾಸಂಧ ವಧೆಯಲ್ಲಿ ಮಾಗಧನಾಗಿ ಹಾಗೂ ಗದಾಯುದ್ಧದಲ್ಲಿ ಕೌರವನಾಗಿ ಪಾಂಡವರನ್ನು ಜರಿಯುವ ಸಂದರ್ಭ; ಅರ್ಜುನನನ್ನು "ಮೂರು ಲೋಕದ ಗಂಡ" ಎಂದು ಮುರಾರಿ ಕೊಂಡಾಡಿದಾಗ ಶಂಭು ಹೆಗಡೆಯವರ ಉತ್ತರ ಜರಾಸಂಧ ವಧೆಯಲ್ಲಿ -
"ಅರ್ಜುನ ನಿಮ್ಮ ಪಾಲಿಗೆ ಮೂರು ಲೋಕದ ಗಂಡನೇ ಇರಬಹುದು ಆದರೆ ನಮ್ಮ ಪಾಲಿಗೆ ಬರೀ ದಂಡ"
ಅಂಥದೇ ಸನ್ನಿವೇಶ ಗದಾಯುದ್ಧದಲ್ಲಿ; ಕ್ಷತ್ರಿಯ ನಿಯಮದಂತೆ ಕೌರವನೊಡನೆ ಹೋರಾಡಲು ಅರ್ಜುನನನ್ನು ಆಯ್ಕೆ ಮಾಡುವಂತೆ ಪ್ರೇರೇಪಿಸುತ್ತ ಕೃಷ್ಣನು ಪಾರ್ಥನನ್ನು ಹೊಗಳಿದಾಗ ಕೌರವನಾದ ಶಂಭು ಹೆಗಡೆಯವರ ಉತ್ತರ -
"ಹೊಗಳುವ ತಂಡ ಇದ್ದರೆ ಯಾರು ಬೇಕಾದರೂ ಎಷ್ಟು ಲೋಕಕ್ಕೂ ಗಂಡ ಆಗಬಹುದು".
ಎರಡೂ ಪ್ರದರ್ಶನಗಳಲ್ಲಿ ಪುನರಾವರ್ತನೆಗೆ ಅವಕಾಶವೇ ಇಲ್ಲದಂತೆ ಅಭಿಮಾನಿಗಳನ್ನು ರಂಜಿಸಿದ ಶಂಭು ಹೆಗಡೆಯವರು ಇಪ್ಪತ್ತರ ಹರೆಯವನ್ನು ನಾಚಿಸುವಂತೆ ನರ್ತಿಸಿದರು. ಭಾವ ಹಾಗೂ ಭಾಷೆಯ ಶ್ರ್ಏಷ್ಠ ಮಿಶ್ರಣವನ್ನು ಶಂಭು ಹೆಗಡೆಯವರ ಪ್ರದರ್ಶನದಲ್ಲಿ ಕಾಣಬಹುದು.
ಭೀಮನ ಪಾತ್ರದಲ್ಲಿ ಶಿವಾನಂದ ಹೆಗಡೆಯವರದು ಹದವರಿತ ಅಭಿನಯ. ರಂಗದ ಹೊರಗಿನ ಅಪ್ಪ-ಮಗನ ಸಂಬಂಧದ ಕುರುಹು ಇಲ್ಲದಂತೇ ನಟಿಸುವ ಶಂಭು ಹಾಗೂ ಶಿವಾನಂದ ಹೆಗಡೆಯವರದು ಒಳ್ಳೆಯ ಕಲಾವಿದ ಜೋಡಿ. ಗದಾಯುದ್ಧದ ಭೀಮನನ್ನು ಅಭಿನಯಿಸುವಲ್ಲಿ ಸೃಜನಶೀಲತೆ ತೋರುವ ಶಿವಾನಂದ ಹೆಗಡೆಯವರು ಮುಂಚಿನಿಂದಲೂ ಪ್ರಚಲಿತದಲ್ಲಿರುವ ಎದುರು ಸಿಟ್ಟಿನ ಭೀಮನನ್ನು ಚಿತ್ರಿಸದೇ, ತುಸು ತಾಳ್ಮೆಯ ವ್ಯಕ್ತಿತ್ವವಾಗಿ ಅಭಿನಯಿಸುತ್ತಾರೆ. ಕೌರವನನ್ನು ಹುಡುಕಿ ಯುದ್ಧಕ್ಕೆ ಆಹ್ವಾನಿಸಲು ಹೊರಡುವಾಗ ಕೄಷ್ಣನೂಂದಿಗೆ ಭೀಮ ನಡೆಸಿದ ಚುರುಕು ಸಂಭಾಷಣೆ ಪ್ರೇಕ್ಷಕರ ಮನ ಗೆದ್ದಿತು. ಕೃಷ್ಣನ ಪಾತ್ರದಲ್ಲಿ ಡಾ. ರಾಜೇಂದ್ರ ಕೆದಿಲಾಯ ಅವರದು ಯಾವುದೇ ವೃತ್ತಿಪರ ಮೇಳದ ಕಲಾವಿದರಿಗೆ ಸವಾಲೊಡ್ಡುವ ಅಭಿನಯ. ಅವರ ಆಕರ್ಷಕ ನೃತ್ಯ ಭಂಗಿ, ಕುಣಿತದ ರಭಸಕ್ಕೆ ಪ್ರೇಕ್ಷಕರಿಂದ ಸಭೆಯಲ್ಲೆಲ್ಲಾ ಕರತಾಡನ ಮೊಳಗಿತು. ಕೃಷ್ಣನ ಪಾತ್ರ ಪೋಷಣೆಗೆ ಹೆಸರುವಾಸಿಯಾಗಿರುವ ಬಳ್ಕೂರು ಕೃಷ್ಣಯಾಜಿಯವರ ಶೈಲಿಯಲ್ಲಿ ನರ್ತಿಸಿದ ರಾಜೇಂದ್ರ ಕೆದಿಲಾಯ ಅವರನ್ನು ನ್ಯೂಜೆರ್ಸಿಯ ಅಭಿಮಾನಿಗಳು ಮೆಚ್ಚಿದರು.
ಗದಾಯುದ್ಧ ಯಕ್ಷಗಾನ ಪ್ರಸಂಗದಲ್ಲಿ ಸಂಜಯನದು ಒಂದು ಪ್ರಮುಖ ಪಾತ್ರ; ಶಂಭು ಹೆಗಡೆಯವರಂಥ ಕಲಾವಿದರಿಗೆ ಶೋಕರಸ ಪ್ರದರ್ಶನಕ್ಕೆ ಇಂಬು ಕೊಡುವ ಸಂಜಯನ ಪಾತ್ರವನ್ನು ಹವ್ಯಾಸೀ ಕಲಾವಿದ ಶಶಿಧರ ಸೋಮಯಾಜಿಯವರು ಸಮರ್ಥವಾಗಿ ನಿರ್ವಹಿಸಿ ಕೌರವನ ಪಾತ್ರಪೋಷಣೆಗೆ ಸಹಕರಿಸಿದರು. ನೆಬ್ಬೂರರ ಭಾವಪೂರಿತ ಭಾಗವತಿಕೆ ಹಾಗೂ ಕೃಷ್ಣಮೂರ್ತಿಯವರ ಚಂಡೆ ಹಾಗೂ ಮದ್ದಳೆಯ ಹಿಮ್ಮೇಳ ಪ್ರಸಂಗಕ್ಕೆ ರಂಗು ತಂದಿತ್ತು. ಅಭಿಮಾನಿಗಳನ್ನು ರಂಜಿಸಿ, ಅನಿವಾಸಿ ಭಾರತೀಯರಿಗೆ ಯಕ್ಷಕಲೆಯನ್ನು ಪರಿಚಯಿಸಿ ಯಶಸ್ವೀ ತಿರುಗಾಟ ನಡೆಸಿದ ಕೆರೆಮನೆ ತಂಡದ ಪ್ರದರ್ಶನ ಬಹುಕಾಲ ನೆನಪಿನಲ್ಲಿರುತ್ತದೆ.
- ಕನ್ನಡಿಗ
2 comments:
kannadiga-
nimma blog heege AkasmikavAgi sikkitu. prasanga chennAgittu, howdu,
Its not an easy task to coordinate an event and bring artistes from India and I am thankful that we are in an era that we get to see such pgms from homeland in US.
One thing I didnt appreciate was the vandanArpaNe which was dragged forever like chewing gum.
Dhanyavaada Samanvitha avare, nimma maatu nija. vandanaarpane went on because the organizers had no clue or control over whatever was going on the stage -:)
Post a Comment