ಕರ್ನಾಟಕದ ಅದರಲ್ಲೂ ಬೆಂಗಳೂರಿನ ರಿಜಿಸ್ಟ್ರಾರ್ ಕಛೇರಿಯನ್ನೂ, ಅದರ ಕಾರ್ಯವೈಖರಿಯನ್ನು ನೋಡುವ ಕಾಲವೊಂದು ಬರುತ್ತದೆ ಎಂದು ನಾನೆಣಿಸಿರಲಿಲ್ಲ. ಸಿಲ್ಕ್ ಬೋರ್ಡ್ ಸಿಗ್ನಲ್ಲಿನ, ಹೊಸೂರು ರಸ್ತೆಯ ಟ್ರಾಫ಼ಿಕ್ ಜಾಮ್‌ನಲ್ಲಿ ಅರ್ಧ ಜೀವನ ಕಳೆದು ಮೂರ್ತಿ, ಪ್ರೇಮ್‌ಜೀಗಳಾದಿಯಾಗಿ ಐ ಟಿ ದಿಗ್ಗಜರೆಲ್ಲರೂ ಸಿಲ್ಕ್ ಬೋರ್ಡ್ ಚರಂಡಿಯ ದುರ್ನಾತ ಮೂಸುತ್ತ ಸಿಗ್ನಲ್ ಕಾಯುವ ದುರ್ಗತಿಗೆ ಮರುಗುತ್ತ, ಅಮೇರಿಕೆಗೆ ಕಾಲಿಟ್ಟವನು ಅಲ್ಲಿಗೆ ತಿರುಗಿ ನೋಡುವ ವಿಚಾರ ಮಾಡದೇ ಹಾಯಾಗಿದ್ದೆ. ನಿಜವಾಗಲೂ ಹೇಳುತ್ತೇನೆ, ಬೆಂಗಳೂರಿನ ಟ್ರಾಫ಼ಿಕ್ ದುರವಸ್ತೆಯನ್ನು ನೋಡಿಯೂ "ನಮ್ಮ ಬೆಂಗಳೂರು" ಎಂದು ಹೇಳಿಕೊಂಡು ಮೆಚ್ಚಿ ನುಡಿಯಲು ದುರಭಿಮಾನಿಯಿಂದ ಮಾತ್ರ ಸಾಧ್ಯ; ಅಭಿಮಾನಿಯಿಂದಲ್ಲ.
ಇನ್ನು ಮೂಲ ವಿಷಯಕ್ಕೆ ಬರುತ್ತೇನೆ, ಊರಿನ ಚಿಂತೆ ಮಾಡದೇ ಹಾಯಾಗಿದ್ದವನಿಗೆ ಇದ್ದಕ್ಕಿದ್ದಂತೆ ಬೆಂಗಳೂರಿನಲ್ಲೊಂದು ಸೈಟು ಮಾಡುವ ಹುಕ್ಕಿ ಬಂತು. ಕಾರಣವಿಷ್ಟೇ, ತೀರಾ ಫೋನು ಮಾಡುವ ಆತ್ಮೀಯ ಸ್ನೇಹಿತರೂ ಕೂಡಾ "ಬೆಂಗಳೂರಿನಲ್ಲಿ ಸೈಟು ಇಲ್ಲದವ" ಎಂದು ನನ್ನನ್ನು ಕನಿಕರದ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದರು. ಅಲ್ಲದೇ ನನ್ನ ಮನದಲ್ಲಿ ಕೂಡಾ, "ತಾಯಿ ಬಡಕಲಾದರೇನು, ಸೀರೆ ಹರಕಲಾದರೇನು ಅವಳು ಮಮತೆಯ ಖನಿಯೇ ಅಲ್ಲವೇ?, ಇಂದಲ್ಲ ನಾಳೆ ಬೆಂಗಳೂರೇ ಅಲ್ಲವೇ ನಮ್ಮ ಊರು" ಎಂಬಂಥ ಭಾವನೆಗಳು ಮುತ್ತಿಕ್ಕಿ, ಒಂದು ಸೈಟು ಖರೀದಿಸಿಯೇ ತೀರುವುದು ಎಂದು ನಿರ್ಧರಿಸಿದೆ. ಕೈಲಿ ಹಣದ ಥೈಲಿ ಹೊರಟು ಬೆಂಗಳೂರು ತಲುಪಿದರೆ ದಿನವೆರಡರಲ್ಲಿ ಸೈಟು ಹುಡುಕುವುದು ಕಷ್ಟವೇನಲ್ಲ. ಸದ್ಯಕ್ಕಂತೂ ಬೆಂಗಳೂರಿನ ರಸ್ತೆಯಲ್ಲಿ ಸಿಗುವ ಪ್ರತಿ ಮೂರನೇ ವ್ಯಕ್ತಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿರುತ್ತಾನೆ.
ಎಲೆಕ್ಟ್ರಾನಿಕ್ ಸಿಟಿ ಹತ್ತಿರದ ಲೇಔಟ್ ಒಂದರಲ್ಲಿ ಸೈಟು ಖರೀದಿಸುವ ನಿರ್ಧಾರಕ್ಕೆ ಬಂದೆ. ಜಾಗದ ಪಹಣಿ ಪತ್ರಿಕೆ, ದಸ್ತಾವೇಜು, ಮೂಲ ಗೇಣಿ ಇತ್ಯಾದಿಯಾಗಿ ಸಾವಿರ ದಾಖಲೆಗಳನ್ನು ತೆಗೆದು ಪರಿಶೀಲನೆ ನಡೆಸಿದ್ದಾಯಿತು. ಇದು ಬರೀ ಮೊದಲನೆಯ ಹಂತ. ಇನ್ನು ರಿಜಿಸ್ಟರ್ ಹೂವೆತ್ತಿದಂತೆ ಆಗುತ್ತದೆ ಸಾರ್ ಎಂದು ಬೆಣ್ಣೆಯಲ್ಲಿ ಕೂದಲೆಳೆದಂತೆ ಹೇಳಿದ ಬಿಲ್ಡರ್. ಅದಲ್ಲದೇ ಹೋಗಲು ಕಾರಿನ ವ್ಯವಸ್ಥೆ, ಮುಂಗಡವಾಗೇ ಲಂಚ ಕೊಟ್ಟು ಕಾದಿರಿಸಿದ್ದೇವೆ ಎಂಬ ಭರವಸೆಯೂ ಬಂತು. ಲಂಚ ವ್ಯವಸ್ಥೆ ಸಾಮಾನ್ಯವಾಗಿರುವಾಗ "ಮುಂಗಡ ಲಂಚ ವ್ಯವಸ್ಥೆ" ಇದೆ ಎಂದು ತಿಳಿದು ಆಶ್ಚರ್ಯವೇನಾಗಲಿಲ್ಲ. ತಿರುಪತಿಯಲ್ಲೂ ಅದೇ ವ್ಯವಸ್ಥೆ ಇದೆಯಲ್ಲವೇ?.
ವ್ಯವಸ್ಥಿತ ದಿನ ಮುಂಜಾನೆ ಹೊರಟು ತಲುಪಿದರೆ, ಕಛೇರಿಯಲ್ಲೊಂದು ಜನಜಾತ್ರೆ. ಆಗ ತಿಳಿಯಿತು ಸರ್ಕಾರ ಅಕ್ರಮ ಜಮೀನನ್ನು ಸಕ್ರಮಗೊಳಿಸುವ ವ್ಯವಸ್ಥೆ ಕಲ್ಪಿಸಿದೆ, ಹೇಳಿಕೇಳಿ ಸಮ್ಮಿಶ್ರ ಸರಕಾರ, ಅದೇನಾದರೂ ಉರುಳಿ ತಿರುಗಿ ಹಳೇ ಕಾಯಿದೆ ಬಂದರೆ? ಎಂಬ ಆತಂಕದಿಂದ ಜನ ಮುಗಿಬಿದ್ದು ಕರಾರು ಪತ್ರ ಪಡೆಯುತ್ತಿದ್ದಾರೆ ಎಂದು. ನಾನು ಮುಂಗಡ ಲಂಚ ಕೊಟ್ಟ ಗಿರಾಕಿಯಾದ್ದರಿಂದ ನನಗೇನೂ ತೊಂದರೆಯಿಲ್ಲ ಎಂದು ನಾನೆಣಿಸಿದ್ದು ತಪ್ಪಾಯಿತು. ಎಲ್ಲರೂ ನನ್ನಂತೇ ಮುಂಗಡ ಕಾದಿರಿಸಿದ ಗಿರಾಕಿಗಳೇ ಆಗಿದ್ದರು. ಅಪಾರ ಜನಜಂಗುಳಿಯನ್ನು ನಿಯಂತ್ರಿಸಲು ಕಛೇರಿಯವರು "ಮೊದಲು ಬಂದವರಿಗೆ ಆದ್ಯತೆ" ಪದ್ಧತಿಯಲ್ಲಿ ಟೋಕನ್ ವ್ಯವಸ್ಥೆ ಜಾರಿಗೊಳಿಸಿದ್ದರು. ಅದನ್ನು ವಿಫಲಗೊಳಿಸುವುದು ಕಷ್ಟವೇನಲ್ಲ, ವ್ಯವಸ್ಥೆಯ ಮೂಲದಿಂದ ಬೇರುಬಿಟ್ಟಿರುವ ಭ್ರಷ್ಟಾಚಾರದಿಂದಾಗಿ ಆ ಟೋಕನ್‌ಗಳನ್ನೂ ಕಾದಿರಿಸಬಹುದು ಎಂದು ನನ್ನೊಂದಿಗೆ ತಲುಪಿದ್ದ ಏಜೆಂಟ್ ಹೇಳಿದ. ಆ ಟೋಕನ್ ಹಂಚುವ ಹುಡುಗರು ಈ ಕಾರ್ಯದಲ್ಲಿ ಪಾಲುದಾರರಾಗಿದ್ದರು.
ನನ್ನನ್ನು ಹೊರಗೇ ಬಿಟ್ಟು "ಹತ್ತು ನಿಮಿಷದಲ್ಲಿ ಬರುತ್ತೇನೆ" ಎಂದು ಏಜೆಂಟ್ ಮಾಯವಾದ. ರಿಜಿಸ್ಟ್ರಾರ್ ಕಛೇರಿಯಲ್ಲಿ ಈಗ ಸಾಕಷ್ಟು ಸುಧಾರಣೆಗಳಾಗಿವೆ, ಕರಾರು ಪತ್ರಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸುತ್ತಾರೆ. ಅಲ್ಲದೇ ಕೋಡಂಗಿಯ ಹಾಗೂ ವೀರಭದ್ರನ (ಜಾಗ ಕೊಟ್ಟವ ಕೋಡಂಗಿ ಇಸಗೊಂಡವ ವೀರಭದ್ರ ಆದರೆ) ಮುಖಚಿತ್ರವನ್ನು ಡಿಜಿಟಲ್ ಕ್ಯಾಮೆರಾದ ಮೂಲಕ ತೆಗೆದು ಕರಾರಿನಲ್ಲಿ ಮುದ್ರಿಸುತ್ತಾರೆ. ಆದರೇನು ಸಕ್ರಮವನ್ನು ಅಕ್ರಮಗೊಳಿಸುವ ಕಾರ್ಯ ನಮ್ಮವರಿಗೆ ಸುಲಭಸಾಧ್ಯ. ಸುಮಾರು ಅರ್ಧ ಘಂಟೆಯ ಬಳಿಕ ನನ್ನ ಏಜೆಂಟ್ ಪ್ರತ್ಯಕ್ಷವಾದ, "ಸಾರ್, ಕ್ಯಾಮೆರಾ ಕೆಲಸ ಮಾಡುತ್ತಿಲ್ಲ ಅದಕ್ಕೇ ಒಳಗೆ ನೂಕುನುಗ್ಗುಲಾಗಿ ರೂಮಿನ ಬಾಗಿಲು ಅರ್ಧ ಮುರಿದಿದೆ. ಆದರೂ ತೊಂದರೆಯೇನಿಲ್ಲ, ಕ್ಯಾಮೆರಾ ಸರಿಯಾದ ನಂತರ ಮೂರನೇ ಫ಼ೈಲು ನಮ್ಮದು" ಎಂದು ಭರವಸೆಯಿತ್ತ. ಅದಾಗಲೇ ನಾವು ತಲುಪಿ ಎರಡು ಘಂಟೆ ಕಳೆದಿತ್ತು. ಸುಮಾರು ಒಂದು ಸಾವಿರ ಜನ ಒಳಗೆ ಜಮಾಯಿಸಿದ್ದರೆ, ಅದರ ಎರಡರಷ್ಟು ಜನ ಹೊರಗೆ ಸೇರಿದ್ದರು. ಹೆಂಗಸರು, ಮಕ್ಕಳು, ಅಂಗವಿಕಲರನ್ನಂತೂ ಕೇಳುವವರೇ ಇರಲಿಲ್ಲ. ಅಷ್ಟೊಂದು ಹಣ ಚಲಾವಣೆಯ ನಡುವೆ ಅವರಿಗೆ ಅವಕಾಶವಾದರೂ ಎಲ್ಲಿದೆ?
ಕೊನೆಗೂ ನನ್ನ ಸರದಿ ಬಂತೆಂದು ಏಜೆಂಟ್ ಒಳಗೆ ಕರೆದ. ಒಳಗೆ ಹೋಗಲು ಜಾಗವಾದರೂ ಎಲ್ಲಿದೆ? ಬಾಗಿಲು, ಕಿಟಕಿ, ಗವಾಕ್ಷಿ ಸಾಧ್ಯವಿದ್ದ ಎಲ್ಲ ರಂಧ್ರಗಳಲ್ಲೂ ಜನ ನುಸುಳಿದ್ದರು. ಅದು ಹೇಗೆ ಒಳ ಸೇರಿದೆನೋ ನನಗೆ ಗೊತ್ತಿಲ್ಲ. ಖಂಡಿತವಾಗಿಯೂ ಸಶಕ್ತರ ಹೊರತಾಗಿ ಬೇರಾರಿಗೂ ಒಳ ಹೋಗಲು ಸಾಧ್ಯವೇ ಇರಲಿಲ್ಲ. ಉಸಿರುಗಟ್ಟಿಸುವ ಸನ್ನಿವೇಶ; ದೇಹದ ಸಕಲ ನರನಾಡಿಗಳಿಂದಲೂ ಬೆವರು ಧಾರಾಕಾರವಾಗಿ ಹರಿಯುತ್ತಿತ್ತು. ತಿರುಗಿ ಇನ್ನೊಂದು ದಿನ ಬರೋಣವೆಂದರೆ, ನನ್ನ ರಜೆ ಮುಗಿದು ಆ ದಿನ ಸಾಯಂಕಾಲ ವಿಮಾನ ಹತ್ತಲೇ ಬೇಕಾಗಿತ್ತು. ಅಂತೂ ಅರ್ಧ ಘಂಟೆಯ ತಿಕ್ಕಾಟ, ಜಗ್ಗಾಟದ ನಂತರ ಗುಮಾಸ್ತನ ಟೇಬಲ್ ತಲುಪಿದರೆ ಕರೆಂಟ ಸರಬರಾಜು ನಿಂತಿತು. ಅದುವರೆಗೂ ಮೇಲೆ ಫ಼್ಯಾನ್ ತಿರುಗುತ್ತಿತ್ತೆಂದು ಆಗ ತಿಳಿಯಿತು. ಈಗಂತೂ ಎಲ್ಲೆಲ್ಲೂ ಬೆವರಿನ ಪ್ರವಾಹದೊಂದಿಗೆ, ಮೈಸೂರು ರಸ್ತೆಯ ವೃಷಭಾವತಿ ನದಿಯ ನೆನಪಾಯಿತು. ಇನ್ನೇನು ಸಾಧ್ಯವೇ ಇಲ್ಲ, ಸತ್ತರೆ ಸಾಯಲಿ ಯಾರಿಗೆ ಬೇಕು ಈ ಸೈಟು, ಮುಂಗಡ ಹಣ ನಾಯಿ ಪಾಲಾದರೂ ಚಿಂತೆಯಿಲ್ಲ ಎಂದೆನಿಸಿ ಹೊರಡಲು ಅನುವಾದೆ, ಆಗ ನನ್ನ ಭುಜ ತಟ್ಟಿದ ಏಜೆಂಟ್ ಹೇಳಿದ "ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್ ಇನ್ನೇನು ಪವರ್ ಬಂದೇ ಬಿಡುತ್ತದೆ". ಅವನನ್ನು ದಬಾಯಿಸುವ ಶಕ್ತಿಯೂ ಇಲ್ಲವಾಗೆ ನನ್ನ ಸ್ವರ ಗಂಟಲಲ್ಲೇ "ಬೆಬ್ಬೆಬ್ಬೆ" ಎಂದು ಉಳಿಯಿತು. ಅಷ್ಟೇ ಅಲ್ಲ ಅಲ್ಲೇ ಮೈಗೆ ಅಂಟಿಕೊಂಡಂತಿದ್ದ ಜನರಿಗೆ ಕೂಡ ನನ್ನ ಪರಿಚಯ ಮಾಡಿಕೊಟ್ಟ. ಕೆಲವರು ತೆಲುಗಿನಲ್ಲಿ "ಅಮೇರಿಕಾವಾಡು" ಎಂದೋ ಏನೋ ಹೇಳಿಕೊಂಡರು. ಹೆಚ್ಚಿನವರೆಲ್ಲಾ ತೆಲುಗಿನಲ್ಲೇ ಸಂಭಾಷಣೆ ನಡೆಸುತ್ತಿದ್ದರಿಂದ ನನಗೆ ಹೈದರಾಬಾದಿನಲ್ಲಿ ಸೈಟು ಖರೀದಿಸುತ್ತೆದ್ದೇನೋ ಎಂದು ಅನಿಸತೊಡಗಿತು.
ಹೀಗೆ ಸುಮಾರು ಅರ್ಧ ಘಂಟೆ ಕಳೆದಿರಬಹುದು, ಕರೆಂಟ್ ಬಂತು. ಎಲ್ಲೆಲ್ಲೂ ಹರ್ಷದ ಉದ್ಗಾರ, ಏನೋ ಗಳಿಸಿದಂತೆ ಸಂತಸ. ಟೇಬಲ್ಲಿನ ಆಚೆ ಕುಳಿತಿದ್ದವನನ್ನು ನೋಡಿ ಹಳೇ ಕನ್ನಡ ಚಿತ್ರಗಳ ವಜ್ರಮುನಿಯ ಚಿತ್ರ ನೆನಪಿಗೆ ಬಂತು. ಅದೇ ಖಳನಾಯಕನ ಮುಖಚಹರೆ, ಟೇಬಲ್ಲಿನ ಆಚೆಯ ಜಗತ್ತಿಗೂ ತನಗೂ ಸಂಬಂಧವೇ ಇಲ್ಲದಂಥ ಮುಖಭಾವ; ಅಲ್ಲದೇ ಅವನ ಎಡಕ್ಕೊಬ್ಬ, ಬಲಕ್ಕೊಬ್ಬ ಏಜೆಂಟ್‌ಗಳು. ಫ಼ೈಲನ್ನು ತಮಗೆ ಬೇಕಾದಂತೆ ಹೊಂದಿಸಿ ಇಡುವುದು, ಜನರ ರುಜು ಪಡೆಯುವುದು, ಕ್ಯಾಮೆರಾದಲ್ಲಿ ಮುಖಚಿತ್ರ ತೆಗೆಯುವುದು ಇತ್ಯಾದಿಯಾಗಿ ಸಕಲ ಕೆಲಸಗಳನ್ನೂ ಅವರೇ ಮಾಡುತ್ತಿದ್ದರು. ಎಡಕ್ಕಿದ್ದವನೊಂದಿಗೆ ನನ್ನ ಏಜೆಂಟ್‌ನ ವ್ಯವಹಾರ ಕುದುರಿದ್ದರಿಂದ ಕರಾರು ಪತ್ರದ ಕೆಲಸ ಹೂವೆತ್ತಿದಂತೆ ಆಯಿತು. ಕೆಲಸದ ಮನೆ ಹಾಳಾಗಲಿ, ನನ್ನ ಗತಿಯೇನಾಗುತ್ತದೆಯೆಂದು ನಾನು ಕೇಳಿರಲಿಲ್ಲವಲ್ಲ ಅದು ನನ್ನ ತಪ್ಪು. ಅಂತೂ ಹೊರಗೆ ಬಂದಾಗ ಮದ್ಯಾಹ್ನ ಮೂರು ಘಂಟೆ. ಬೆಳಗಿಂದ ಅಲ್ಲಿವರೆಗೆ ಹೆಚ್ಚೆಂದರೆ ಇಪ್ಪತ್ತು ಕರಾರು ಪತ್ರ ಮಾಡಿಸಿರಬಹುದು ಅಷ್ಟೇ. ಕಂಪ್ಯೂಟರ್ ಇದ್ದರೇನು, ನಡೆಸುವ ಜನರೇ ಹೀಗಿರುವಾಗ?
ಆಣೆ ಮಾಡಿ ಹೇಳುತ್ತೇನೆ, ಇದು ಕಾಲ್ಪನಿಕ ಕಥೆಯಲ್ಲ ನಾನು ಕಣ್ಣಾರೆ ಕಂಡ, ಅನುಭವಿಸಿದ ಸಂಗತಿ. ಇದು ಯಾವುದೇ ದೇಶದಲ್ಲಿ ನಡೆದಿರಲಿ, ಅಲ್ಲಿನ ವ್ಯವಸ್ಥೆ ಎಕ್ಕುಟ್ಟು ಹೋಗಿದೆ ಎಂಬುದಕ್ಕೆ ಅದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ವೆಂಕಟಾಚಲ ಅಲ್ಲ, ಆ ತಿರುಪತಿಯವನೇ ಬಂದರೂ ಇದು ಸುಧಾರಿಸುವುದು ಕಷ್ಟ ಎಂದು ನನಗೆ ಅನಿಸಿದ್ದು ಸುಳ್ಳಲ್ಲ. ನಿತ್ಯ ನರಕದ ಆ ಕಛೇರಿಯಲ್ಲಿ ಸುಧಾರಣೆಯಾಗಿದ್ದರೆ ತಿಳಿಸಿ.
- ಕನ್ನಡಿಗ
Use Baraha fonts to read this blog.. http://www.baraha.com
Saturday, September 16, 2006
Subscribe to:
Post Comments (Atom)
4 comments:
ನಮಸ್ತೆ,
ನೀವು ಹೇಳಿದ್ದು ನಿಜ ಬಿಡಿ.
ಯಾಕೆಂದರೆ ನಾನು ಆನೇಕಲ್ಲಿನವನು.
ಕೆಲವು ಸಲ ನಾನು ರಿಜಿಸ್ಟಾರ್ ಕಚೇರಿಗೆ ಹೋಗಿದ್ದೆ. ನೀವು ಹೇಳಿದ್ದಷ್ಟು ಹದಗೆಟ್ಟಿದೆ ಅಂತ ಗೊತ್ತಿರಲಿಲ್ಲ ಅಷ್ಟೆ.
Very Nice Blog!
I had the same experience when I visited Anekal Registrar office in July 2006. I decided not to go there again unless I decide to sell my site.
ರಿಜಿಸ್ಟಾರ್ ಕಚೇರಿಯ ಅನುಭವವನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ.ನಮ್ಮ ಕೆಲಸಗಳು ಸುಸೂತ್ರವಾಗಿ ನಡೆದರೆ ಸಾಕೆಂದು ಲಂಚ ಕೊಡುವ ನಾವು ಪರೋಕ್ಷವಾಗಿ ಆ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತಿದ್ದೇವೆ. ಆದರೆ ಅದನ್ನು ಬಿಟ್ಟು ಬೇರೆ ದಾರಿ ನಮಗೆಲ್ಲಿದೆ?
nanna kengEri sub rigistrar office anuBava kooDa adE!
Post a Comment