Use Baraha fonts to read this blog.. http://www.baraha.com

Saturday, June 17, 2006

ಆನಂದ ಆಚಾರಿ ಮತ್ತು ನಾನು

ನಮ್ಮೂರಲ್ಲಿ ಮರಕೆಲಸದವನನ್ನು ಆಚಾರಿ ಅಂತಾರೆ. ನಮ್ಮ ಮನೆ ಹತ್ತಿರ ಆನಂದ ಆಚಾರಿ ಅಂತ ಒಬ್ಬ ಬಡಗಿ ಇದ್ದ. ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದ. ಅವನ ಕೆತ್ತನೆ, ಕುಶಲತೆ ಬಗ್ಗೆ ದೂಸರಾ ಮಾತೆತ್ತುವ ಹಾಗಿರಲಿಲ್ಲ. ಆದರೆ ಅವನಲ್ಲೂ ಒಂದು ಐಬು ಇತ್ತು. ಅವನು ಯಾವುದೇ ಕೆಲಸವನ್ನೂ ಸಮಯಕ್ಕೆ ಸರಿಯಾಗಿ ಮಾಡಿದ ದಾಖಲೆಯೇ ಇರಲಿಲ್ಲ. ನಮ್ಮ ಮನೆಯ ಮರಮುಟ್ಟುಗಳನ್ನು ಆನಂದ ಆಚಾರಿಯ ಹತ್ತಿರ ಕೆತ್ತಿಸುವ ಹಾಗಿದ್ದರೆ, ಅದಕ್ಕೆ ಸಾಕಷ್ಟು ಪೂರ್ವ ಸಿದ್ಧತೆಯೇ ಬೇಕಾಗುತ್ತಿತ್ತು. ಕನಿಷ್ಟ ನಾಲ್ಕು ತಿಂಗಳಾದರೂ ಮುಂಚಿತವಾಗಿ ದಿನ ಗೊತ್ತು ಪಡಿಸಿದರೆ ಮನೆ ಗೃಹಪ್ರವೇಶಕ್ಕೆ ಬಾಗಿಲು ಸಿಗುವ ಸಾಧ್ಯತೆ ಇತ್ತು. ಇಲ್ಲವಾದರೆ ಬಾಗಿಲಿಲ್ಲದೆಯೇ ಗೃಹಪ್ರವೇಶಕ್ಕೆ ತಯಾರಿರಬೇಕು! ಇದನ್ನು ನಂಬದೇ ರಿಸ್ಕ್ ತೆಗೆದುಕೊಂಡ ಕೆಲ ಮನೆ ಮಾಲೀಕರು ಗೃಹಪ್ರವೇಶವಾಗಿ ಎಷ್ಟೋ ದಿನಗಳ ಬಳಿಕ ಬಾಗಿಲು ನಿಲ್ಲಿಸಿದ್ದರು. ಗೊತ್ತುಪಡಿಸಿದ ಹಿಂದಿನ ದಿನದವರೆಗೂ ಧೈರ್ಯವಾಗಿ ಹುಸಿ ಭರವಸೆ ನೀಡುವ ಆತನ ಮನೋಬಲ(!) ನನಗೆ ಯಾವಾಗಲೂ ಅಚ್ಚರಿಯ ಸಂಗತಿಯಾಗಿತ್ತು. ಮುಂದೊಂದು ದಿನ ನಾಡಿನ ಹೆಮ್ಮೆಯ ರಾಜಕಾರಣಿಯಾಗುವ ಸಾಧ್ಯತೆಯೂ ಇಲ್ಲದಿಲ್ಲ ಎಂದು ಅಂದುಕೊಳ್ಳುತ್ತಿದ್ದೆ. ಅಂತೂ ಕೊನೆಗೊಂದು ದಿನ ಅವನ ಧೈರ್ಯದ ಹಿಂದಿನ ರಹಸ್ಯ ಸರಕಾರೀ ಸರಬರಾಜಿನ ಪಾಕೀಟು ಎಂದು ತಿಳಿದಾಗ ಅಬಕಾರಿ ಇಲಾಖೆಗೆ ಮನದೊಳಗೆ ಮೆಚ್ಚುಗೆ ಸಂದಾಯಿಸಿದ್ದೆ.
ಮೊನ್ನೆ ಪ್ರಾಜೆಕ್ಟ್ ಮೀಟಿಂಗ್ ಮುಗಿಸಿ ಹೊರಬಂದು ಕಂಪ್ಯೂಟರ್ ಮುಂದೆ ಕುಳಿತಾಗ ನನ್ನನ್ನು ಆನಂದ ಆಚಾರಿ ಬಲವಾಗಿ ಕಾಡಿದ್ದ. ಪೂರೈಸಲು ಸಾಧ್ಯವೇ ಇರದಿದ್ದ ಗಡುವನ್ನು ಅದಾವ ಧೈರ್ಯದ ಮೇಲೆ ಒಪ್ಪಿ ಪಿರಂಗಿ ಮ್ಯಾನೇಜರ್ (ನಮ್ಮ ಬಿಳಿಯ ಮ್ಯಾನೇಜರ್ ನನ್ನು ದೇಸೀ ಭಾಷೆಯಲ್ಲಿ ಪಿರಂಗಿ ಅಂತೇವೆ) ಮುಂದೆ ತಲೆ ಅಲ್ಲಾಡಿಸಿದ್ದೆನೋ ಗೊತ್ತಿರಲಿಲ್ಲ. ನಾನೇನಾದರೂ ಒಂದು ಪ್ಯಾಕೆಟ್ ಒಳಗೆ ಸೇರಿಸಿದ್ದೆನಾ ಎಂದು ನನಗೇ ಅನಿಸುವಂಥ ಪರಿಸ್ಥಿತಿ ಇತ್ತು. ಸದ್ಯ ನ್ಯೂಯಾರ್ಕ್ ನಲ್ಲಿ ಪ್ಯಾಕೇಟ್ ಸರಬರಾಜು ಇರದಿದ್ದರಿಂದ ಆ ಸಾಧ್ಯತೆ ಇರಲಿಲ್ಲ. ಏನೇ ಇರಲಿ ಸಾಧ್ಯವಾದಷ್ಟು ಮುಗಿಸೋದು, ಹೆಚ್ಚಿಗೆ ಉಳಿದರೆ ಅದನ್ನ ಲೋಪದೋಷಗಳ ಪಟ್ಟಿ (bugs list)ಗೆ ಸೇರಿಸಿ ಸಂಭಾಳಿಸಿದರಾಯಿತು ಅಂತ ಅಂದುಕೊಂಡು ನನ್ನನ್ನೇ ಸಮಾಧಾನಿಸಿಕೊಂಡೆ. ಇದನ್ನು ಆನಂದ ಆಚಾರಿ ತನ್ನ ಕೆತ್ತನೆ ಭಾಷೆಯಲ್ಲಿ ಹೇಗೆ ಸಂಭಾಳಿಸಿದ್ದನೋ ಗೊತ್ತಿಲ್ಲ. ಸದ್ಯ ಸಾಫ಼್ಟ್‌ವೇರ್ ಕಣ್ಣಿಗೆ ಕಾಣಿಸುವುದಿಲ್ಲ ಬಾಗಿಲ ಚೌಕಟ್ಟಿನ ಥರಾ! ದಿನದ ಇಪ್ಪತ್ನಾಲ್ಕೂ ಗಂಟೆ ಕೆಲಸ ಮಾಡಿದರೂ ಸಾಧ್ಯವೇ ಇರದಿದ್ದ ಗಡುವು ಅದು. ಕೊನೆ ದಿನದವರೆಗೂ ನಾವು ಸರಿದಾರಿಯಲ್ಲಿದ್ದೇವೆ ಎಂದು ಸುಳ್ಳು ಹೇಳಿ ಪಿರಂಗಿ ಮ್ಯಾನೇಜರ್‌ನ ದಾರಿ ತಪ್ಪಿಸಿದ್ದೆ. ಯಾವುದೋ ಮಾಯಾಶಕ್ತಿ ನನ್ನನ್ನು ಈ ಪರಿಸ್ಥಿತಿಯಿಂದ ಪಾರು ಮಾಡಬಹುದು ಎಂಬ ನಂಬಿಕೆ ನನ್ನಲ್ಲಿತ್ತು. ಮನದಲ್ಲೇ ಕರಿಕಾನ ಪರಮೇಶ್ವರಿ ದೇವಿಗೆ ಸಣ್ಣ ಹರಕೆ ಕೂಡಾ ಸಲ್ಲಿಸಿದ್ದೆ.
ಅದಾವ ಶಕ್ತಿಯೂ ಪ್ರಯೋಗವಾದಂತೆ ತೋರಲಿಲ್ಲ. ಮ್ಯಾನೇಜರ್ ಎದುರು ನೋಡುತ್ತಿದ್ದ ದಿನ, ನನಗೆ ಬೇಡವಾಗಿದ್ದ ಆ ದಿನ ಬಂದೇ ಬಂತು. ಅಂತೂ ಕರಿಕಾನ ಪರಮೇಶ್ವರಿ ಈ ಭಕ್ತನ ಹರಕೆ ಪೂರೈಸಲಿಲ್ಲವೇ; ಅದಕ್ಕೆ ನಾನು ನಾಸ್ತಿಕನಾದದ್ದು, ಈ ದೇವರು, ದಿಂಡಿರು ಎಲ್ಲಾ ಸುಳ್ಳು ಎಂದು ಮನೆಯಲ್ಲಿ ಪತ್ನಿಯ ಎದುರು ವಾದ ಮಂಡಿಸಿ ಹರಕೆಯ ಕುರಿಯಂತೆ ತಯಾರಾಗಿ ಆಫೀಸು ತಲುಪಿದೆ. ಸರಿಯಾಗಿ ಒಂಬತ್ತು ಘಂಟೆಗೆ ಮೀಟಿಂಗ್ ರೂಮಿನಲ್ಲಿ ದುಂಡು ಮೇಜಿನ ಸುತ್ತ ಕುಳಿತೆವು. ಒಂದು ಹತ್ತು ನಿಮಿಷ ಎಲ್ಲರ ವಾರಾಂತ್ಯದ ಘಟನೆಗಳ ಸುಖದುಖ: ವಿಚಾರಿಸಿ, ಹಿಂದಿನ ದಿನದ ಬೇಸ್‌ಬಾಲ್ ಮ್ಯಾಚಿನ ಬಗ್ಗೆ ಚರ್ಚೆ ನಡೆಯಿತು. ಢವಢವಿಸುವ ಎದೆಯೊಂದಿಗೆ ನಾನೂ ಆ ಚರ್ಚೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದೆ. ಕೊನೆಗೆ ಏನನ್ನೋ ನೆನಪಿಸಿಕೊಂಡವನಂತೆ ನನ್ನ ಮ್ಯಾನೇಜರ್ ಹೇಳಿದ: "ನೋಡಿ ಆ ಪ್ರಾಜೆಕ್ಟ್ ನಾವು ಕೈ ಬಿಡುವುದೇ ಲೇಸು, ಅದನ್ನು ಪ್ರಾಯೋಜಿಸಿದ್ದ ಗುಂಪು ಹೊರಗುತ್ತಿಗೆ ನಡೆದು ಕೆಲಸವೆಲ್ಲಾ ಭಾರತಕ್ಕೆ ರವಾನೆಯಾಗಿದೆ. ಇನ್ನು ಅವರನ್ನು ನಾವು ಬೆಂಬಲಿಸುವ ಅಗತ್ಯವಿಲ್ಲ". ಮನದಲ್ಲೇ "ಯೆಸ್ ಯೆಸ್" ಎನ್ನುತ್ತಾ ನಾನು ಅರಳಿದ ಮುಖದೊಂದಿಗೆ ಬೇಸ್‌ಬಾಲ್ ಚರ್ಚೆಗೆ ಸಂಭಾಷಣೆ ತಿರುಗಿಸಿದೆ. ಪಾಪ ಆನಂದ ಆಚಾರಿಗೆ ಮಾತ್ರ ಈ ಅವಕಾಶವಿರಲಿಲ್ಲ; ಕಾಲಾಯ ತಸ್ಮೈ ನಮ:.

- ಕನ್ನಡಿಗ

3 comments:

Shrinidhi Hande said...

ನಮಸ್ಕಾರ.

ನಿಮ್ಮ ಬಗ್ಗೆ ನನಗೇನು ಗೊತ್ತಿಲ್ಲ. ಮೇ ೪ ರ ಸುಧಾ ಪತ್ರಿಕೆಯ ಮೂಲಕ ನಿಮ್ಮ ಬ್ಲಾಗ್ ಬಗ್ಗೆ ತಿಳಿಯಿತು.

ನಿಮ್ಮ ಬರಹಗಳು ಚೆನ್ನಾಗಿವೆ. ಓದಿ ಸ೦ತೋಷವಾಯಿತು.

ನಾನು ಶ್ರೀನಿಧಿ , ಚೆನ್ನೈನಲ್ಲಿ ಸತ್ಯಮ್ ಕ೦ಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಸಮಯ ಸಿಕ್ಕಾಗ ನನ್ನ ಬ್ಲಾಗ್ ಓದಲು ಈ ಮೂಲಕ ಆಹ್ವಾನಿಸುತ್ತೇನೆ.

ವ೦ದನೆಗಳೊ೦ದಿಗೆ,
ಶ್ರೀನಿಧಿ.

Kannadiga said...

ಶ್ರೀನಿಧಿ ಅವರೆ,
ನಿಮ್ಮ ಹಾಗೇ ನಾನೂ ಒಬ್ಬ ಐ ಟಿ ಕಾರ್ಮಿಕ, ಅಮೇರಿಕಾದಲ್ಲಿ ವಾಸವಾಗಿದ್ದೇನೆ. ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದ; ಅದಕ್ಕಿಂತ ಹೆಚ್ಚಾಗಿ ನಿಮ್ಮ ಪರಿಚಯವಾಗಿದ್ದು ಸಂತೋಷ. ನಿಮ್ಮ ಬ್ಲಾಗನ್ನು ನನ್ನ ಓದಿನ ಸಂಗ್ರಹಕ್ಕೆ ಸೇರ್ಪಡಿಸಿಕೊಳ್ಳುತ್ತೇನೆ

- ಕನ್ನಡಿಗ

kaaloo said...

ಅಲ್ಲಾ ಸಾರ್, ಇಷ್ಟೊಳ್ಳೆ ಕತೆಗಳನ್ನ ಇಟ್‌ಕೊಂಡು ನೀವು ತುಂಬಾ ಅಪರೂಪಕ್ಕೆ ಬರಿತೀರಲ್ಲ, ಆಗಾಗ್ಗೆ ನಿಮ್ಮ ಬರಹ ಓದೋದೇ ನನ್ನ ಸಂತೋಷ.