ನಮ್ಮ ಜನರಿಗೊಂದು ವಿಚಿತ್ರ ಖಯಾಲಿಯಿದೆ. ಅದೆಂದರೆ, ದಿವಂಗತ ನಾಯಕರ ಲೇವಡಿ ಮಾಡುವುದು. ನೀವು ಯಾರೇ ದಿವಂಗತ ನಾಯಕರ ಉದಾಹರಣೆ ತೆಗೆದುಕೊಳ್ಳಿ, ಹಳೆಯ ತಲೆಮಾರಿನ ಅಂಬೇಡ್ಕರ್, ಮಹಾತ್ಮಾ ಗಾಂಧಿ, ನೆಹರು ಇರಬಹುದು, ಅಥವಾ ಇತ್ತೀಚಿನವರೇ ಇರಬಹುದು. ಇವತ್ತು ಅಣ್ಣಾವ್ರು ನಮ್ಮನ್ನು ಬಿಟ್ಟು ಹೋದರು, ಕಾದು ನೋಡಿ ಸದ್ಯದಲ್ಲೇ ಶುರುವಾಗಲಿದೆ ಈ ನಮ್ಮ "ಬುದ್ಧಿಜೀವಿಗಳ" ಭಾಷಣ; ಅಣ್ಣಾವ್ರು ಮತ್ತು ಅವರ ಕುಟುಂಬದವರನ್ನು ಖಂಡಿತಾ ಬಿಡುವುದಿಲ್ಲ.
ಈ ಸ್ವಭಾವದ ಹಿಂದಿನ ಮನೋಭಾವನೆ ನನಗೆ ಇವತ್ತಿಗೂ ಅರ್ಥವಾಗಿಲ್ಲ. ಎಷ್ಟೋ ಬಾರಿ ಈ ವಿಷಯವಾಗಿ ಆಲೋಚಿಸಿದ್ದೇನೆ. ಯಾವುದೇ ವ್ಯಕ್ತಿ ಎಷ್ಟೇ ಉನ್ನತ ಸ್ಥಾನಕ್ಕೆ ಏರಿದ್ದರೂ ಈ ಸಮಾಜದ ಒಂದು ಅಂಗವೇ ತಾನೆ. ಅವನ ಕಾಲಾವಧಿಯಲ್ಲಿ ತೆಗೆದುಕೊಂಡ ಎಲ್ಲ ನಿರ್ಧಾರಗಳು ಸಮರ್ಪಕವಾಗಿರುತ್ತವೆ ಎಂದುಕೊಳ್ಳುವುದು ಮೂರ್ಖತನ. ಒಂದು ವ್ಯಕ್ತಿತ್ವವನ್ನು ಅಖಂಡತೆಯಲ್ಲಿ ಗ್ರಹಿಸಿದಾಗ ಆ ವ್ಯಕ್ತಿಯ ಔನ್ನತ್ಯ ಕಂಡುಬರುತ್ತದೆ. ಒಮ್ಮೆ ಊಹಿಸಿ ನೋಡಿ, ನಮ್ಮ ದೈನಂದಿನ ದಿನಚರಿಯಲ್ಲಿ ಎಷ್ಟು ಬಾರಿ ಸಮಾಜದ ಬಗ್ಗೆ, ಸುತ್ತಲ ಜಗತ್ತಿನ ಬಗ್ಗೆ ಸ್ಪಂದಿಸುತ್ತೇವೆ? ನಮ್ಮೆದುರಿಗೇ ಬಿದ್ದು ಸಾಯುತ್ತಿದ್ದರೂ ನಮ್ಮ ಮನಸ್ಸು ತಪ್ಪಿ ಹೋಗುವ ಬಿ ಟಿ ಎಸ್ ಬಸ್ಸಿನ ಮೇಲೇ ಇರುತ್ತದೆ. ಹೀಗಿರುವಾಗ ಒಬ್ಬ ಗಾಂಧಿಯನ್ನು, ನೆಹರೂವನ್ನು ಕಲ್ಪಿಸಿಕೊಳ್ಳಿ. ಸಾಧಾರಣ ಬಾಳು ಬದುಕದ ಅವರ ಮನೋಬಲದ ಗರಿಮೆ ಊಹಿಸಿ.
ಹೋಗಲಿ, ನಾವು ಆಯ್ದುಕೊಂಡ ಕ್ಷೇತ್ರದಲ್ಲಾದರೂ ನಮ್ಮ ಸಾಧನೆ ಏನು? ಹೆಚ್ಚಿನವರದು ಸಾಧಾರಣ ಸಾಧನೆ ಅಷ್ಟೆ. ಒಬ್ಬ ತೆಂಡೂಲ್ಕರ್ ಕ್ರಿಕೆಟ್ನಲ್ಲಿ, ರಾಜಕುಮಾರ್ ಚಲನಚಿತ್ರದಲ್ಲಿ ಸಾಧಿಸಿದ್ದನ್ನು ನಾವು ನಮ್ಮ ರಂಗದಲ್ಲಿ ಸಾಧಿಸಿದ್ದೇವೆಯೆ? ಆದರೆ ಅವಕಾಶ ಸಿಕ್ಕರೆ ತೆಂಡೂಲ್ಕರ್ರನ್ನು, ರಾಜಕುಮಾರ ಅವರನ್ನು ಜರಿಯದೇ ಬಿಡೆವು. ಯಾವುದೋ ಮ್ಯಾಚಲ್ಲಿ ಹೊಡೆಯದ ಸೆಂಚುರಿ ನಮಗೆ ಮುಖ್ಯವಾಗಿಬಿಡುತ್ತದೆ.
ನಮ್ಮನ್ನು ಅಗಲಿದ ಡಾ. ರಾಜಕುಮಾರ್ ಅವರ ಅಂತಿಮ ಸಂಸ್ಕಾರದಲ್ಲಂತೂ ಶಾಂತಿ ಕಾಪಾಡದ ಜನ ನಮ್ಮವರು ಎಂದು ಸಾಬೀತಾಗಿರುವಾಗ, ಕಾಲಾನಂತರ ಅವರ ಸಾಧನೆಗಳನ್ನು ಜರಿಯುವ ವಿತಂಡವಾದಿಗಳು ನಾವಲ್ಲ ಎಂದು ತಿಳಿಯುವುದು ತಪ್ಪಾಗುತ್ತದೆ.
- ಕನ್ನಡಿಗ
Use Baraha fonts to read this blog.. http://www.baraha.com
Thursday, April 13, 2006
Subscribe to:
Post Comments (Atom)
3 comments:
ಸರಿಯಾಗಿ ಹೇಳಿದ್ರಿ. ಆರಕ್ಕೆ ಏರಿಸಿದವರೆ ಮೂರಕ್ಕೆ ಇಳಿಸುವವರೂ ಕೂಡಾ. ಸಮಾನ ಚಿಂತನೆಗಳೇ ಇಲ್ವೇ ನಮ್ಮಲ್ಲಿ. ವ್ಯಕ್ತಿಯಲ್ಲಿನ ಒಳ್ಳೆಯತನವನ್ನು ಗುರುತಿಸಿ ಅದರಂತೆ ನಡೆಯುವುದನ್ನು ಕಲಿಯೋದಂತೂ ನಮ್ಮ ಕೈಲಾಗಲ್ಲ, ಅದರ ಬದಲು ಮೇಲೇರಿದಾಗ ತಲೆ ಮೇಲೆ ಕುಳ್ಳಿರಿಸಿಕೊಳ್ತೀವಿ, ಸ್ವಲ್ಪ ಕೆಳಕ್ಕೆ ಬಿದ್ದರೆ ಪೂರ್ತಿಯಾ ಮಣ್ಣು ಮಾಡುವವರೆವಿಗೆ ಬಿಡುವುದಿಲ್ಲ. ಇದೊಂದು ಭಾವನೆಯನ್ನು ಸರಿ ಮಾಡಿಕೊಂಡರೆ ನಮ್ಮನ್ನು ಹಿಡಿಯುವವರೇ ಇಲ್ಲ.
ಇಂತಹ ಕಣ್ತೆರೆಸುವ ಲೇಖನಗಳು ಮತ್ತೆ ಮತ್ತೆ ಬರಬೇಕು. ಒಳ್ಳೆಯ ಕೆಲಸ ಮುಂದುವರೆಯಲಿ.
ಹೌದಲ್ಲಾ... ಯಾವುದೋ ಮ್ಯಾಚಿನಲ್ಲಿ ಹೊಡೆಯದ ಸೆಂಚುರಿಯೇ ನಮಗೆ ಮುಖ್ಯವಾಗುತ್ತದೆ ಎಂಬ ಮಾತಿನಲ್ಲೇ ಎಲ್ಲವೂ ಅಡಗಿದೆ. ಇದೊಂದು ನೆಗೆಟಿವ್ ಟೀಕಾಕಾರರ ಕಣ್ತೆರೆಸುವ ವಾಕ್ಯ. ಏನಂತೀರಿ...?
ಹೌದು ಸರ್, ನನಗೆ ಅನಿಸಿದ್ದನ್ನು ಬರೆದೆ. ನಿಮಗೆ ಇಷ್ಟವಾದರೆ ನನಗಷ್ಟೇ ಖುಷಿ.
- ಕನ್ನಡಿಗ
Post a Comment