ಪ್ರಶಸ್ತಿಗೆ ಸಂದ ಗೌರವ
ಇತ್ತೀಚೆಗೆ ಪ್ರಶಸ್ತಿ ಕೂಡಾ ಒಂದು ವಿವಾದಾತ್ಮಕ ವಸ್ತುವಾಗಿದೆ. ಇಲ್ಲಿ ಸಮಸ್ಯೆ ವಿವಾದದ್ದಲ್ಲ; ಪ್ರಶಸ್ತಿಗೆ ಭಾಜನರಾದ ಅರ್ಹರದು. ಅವರ ಪರಿಸ್ಥಿತಿ ಕಷ್ಟಕರ, ಇತ್ತ ಪ್ರಶಸ್ತಿ ಸಂದ ಬಗ್ಗೆ ಹೆಮ್ಮೆ ಪಡುವ ಹಾಗೂ ಇಲ್ಲ, ಸ್ವೀಕರಿಸದೆ ನಿರಾಕರಿಸುವುದೂ ಕಷ್ಟ; ಅದೂ ಕೂಡ ವಿವಾದದ ವಸ್ತುವೇ. ಅದಕ್ಕಿಂತ ಹೆಚ್ಚಿನದಾಗಿ ಪ್ರಶಸ್ತಿ ಸಮಿತಿಗಳೂ ಅಷ್ಟೆ; ಯಾವುದೋ ಒತ್ತಡಕ್ಕೆ ಒಳಗಾಗಿ ಗೌರವವನ್ನು ರಾಮನವಮಿಯ ಪಾನಕ ಪ್ರಸಾದದಂತೆ ಹಂಚುತ್ತವೆ. ಅದಕ್ಕೆ ಸೂಕ್ತ ಉದಾಹರಣೆ ನಮ್ಮ ಸರ್ಕಾರದ ರಾಜ್ಯಪ್ರಶಸ್ತಿ. ಆಗಲೇ ದ್ವಿಶತಕದ ಹತ್ತಿರದವರೆಗೂ ಶಿಫಾರಸು ಮಾಡಿದ ಗರಿಮೆ ಈ ಸಮಿತಿಗೆ ಇದೆ. ಅದೇನೇ ಇರಲಿ, ಈ ಬಾರಿಯ ಪಂಪ ಪ್ರಶಸ್ತಿಯ ಸಮಿತಿಯ ಆಯ್ಕೆ ಪ್ರಶಂಸನೀಯ.
ಸಮಿತಿಯ ಆಯ್ಕೆಯಾದ ಡಾ. ಎಸ್ ಎಲ್ ಭೈರಪ್ಪನವರು ಅರ್ಹ ವ್ಯಕ್ತಿ ಎಂದು ನಾನು ಅಭಿನಂದಿಸುವುದಕ್ಕಿಂತ ಹೆಚ್ಚಾಗಿ ಪ್ರಶಸ್ತಿ ಸಮಿತಿ ಭೈರಪ್ಪನವರನ್ನು ಆಯ್ಕೆ ಮಾಡುವ ಧೈರ್ಯ ತೋರಿಸಿತು ಎಂದು ಸಂತಸಪಡುತ್ತೇನೆ. ವಾಸ್ತವವಾಗಿ ನೋಡಿದರೆ, ಭೈರಪ್ಪನವರು ಈ ಪ್ರಶಸ್ತಿ ಪುರಸ್ಕಾರಗಳನ್ನು ದಾಟಿ ನಡೆದಾಗಿದೆ. ಅವರನ್ನು ಗೌರವಿಸುವುದು ಅಂದರೆ ನಮ್ಮನ್ನು ನಾವು ಗೌರವಿಸಿಕೊಂಡಂತೆ. ಇಷ್ಟಿದ್ದರೂ ನಮ್ಮ ಹಲವಾರು ಪ್ರಶಸ್ತಿ ಸಮಿತಿಗಳು ಈ ಅಂಶವನ್ನು ಗುರುತಿಸುವಲ್ಲಿ ವಿಫಲವಾಗಿವೆ. ಬಹುಶ: ಅವರು ಇನ್ನಾವುದೋ ರಾಜ್ಯದಲ್ಲಿ ಹುಟ್ಟಿ ಅಲ್ಲಿ ಸಾಹಿತ್ಯ ಕೃಷಿ ನಡೆಸಿದ್ದರೆ, ಜ್ಞಾನಪೀಠ ಪ್ರಶಸ್ತಿ ಕೂಡಾ ಅದೆಂದೋ ಅವರ ಪಾಲಾಗಿರುತ್ತಿತ್ತು. ಕನ್ನಡದ ದೌರ್ಭಾಗ್ಯವೋ, ಸೌಭಾಗ್ಯವೋ ಗೊತ್ತಿಲ್ಲ, ಇಲ್ಲಿ ಅರ್ಹರ ಪಟ್ಟಿ ತೀರಾ ಉದ್ದವಿದೆ; ಕಾಯುವ ಆಯುಷ್ಯವನ್ನು ಕಾಲ ಕರುಣಿಸಿದರೆ ಮಾತ್ರ ಪ್ರಶಸ್ತಿ ದೊರಕಲು ಸಾಧ್ಯ.
ನನಗೆ ಭೈರಪ್ಪನವರ ಕಾದಂಬರಿಗಳಲ್ಲಿ ಅತ್ಯಂತ ಇಷ್ಟಕರವಾಗುವ ಅಂಶ ಅವುಗಳ ಹಿಂದಿನ ಅಧ್ಯಯನಶೀಲತೆ. ಅವರ ಕೃತಿಗಳು "ಸಂತೆಯ ಹೊತ್ತಿನ ಮೂರು ಮೊಳ"ಗಳಂತಲ್ಲ. ಅವರ ಪ್ರತಿಯೊಂದು ಕಾದಂಬರಿಯೂ ವಿಶಿಷ್ಟ, ವಿಭಿನ್ನ. ಎಲ್ಲಾ ದೃಷ್ಟಿಯಿಂದಲೂ ಓದುಗನನ್ನು ಪ್ರಭಾವಿಸಬಲ್ಲ ಅವರ ಕೃತಿಗಳು ನನಗೆ ಇಷ್ಟ. ಅಷ್ಟೇ ಅಲ್ಲ, ಅವರ ಒಂದು ಪುಸ್ತಕ ಕೈಗೆತ್ತಿಕೊಂಡರೆ, ಸರಾಗವಾಗಿ ದಿನಗಳನ್ನು ಕಳೆಯಬಹುದು. ನನಗೆ ಇನ್ನೂ ನೆನಪಿದೆ, ಕಾಲೇಜಿನ ದಿನಗಳಲ್ಲಿ ಅವರ "ಧರ್ಮಶ್ರೀ" ಓದಿದ ನಾನು ನನ್ನ ಕ್ರಿಶ್ಚಿಯನ್ ಸಹಪಾಠಿಯನ್ನು ಚರ್ಚೆಗೆ ಎಳೆದಿದ್ದೆ, ಅವಳು ಚರ್ಚಿಗೆ ಎಳೆದಿದ್ದಳು! ಸದ್ಯ ಪಾದ್ರಿಯ ಪ್ರವಚನಕ್ಕಿಂತ ಹೊರತಾಗಿ ಮುಂದೇನೂ ನಡೆಯಲಿಲ್ಲ.
ಭೈರಪ್ಪನವರ ಕೃತಿಗಳನ್ನು ವಿಮರ್ಶೆ ಮಾಡುವ ಮಟ್ಟದ ವಿಮರ್ಶಕ ನಾನಲ್ಲವಾದರೂ, ಒಬ್ಬ ಓದುಗನಾಗಿ, ಅವರಿಗೆ ಸಂದ ಈ ಪ್ರಶಸ್ತಿಯಿಂದ ಪ್ರಶಸ್ತಿಯ ಗೌರವ ಇಮ್ಮಡಿಸಿತು ಎಂದು ನಂಬುತ್ತೇನೆ, ಏನಂತೀರಾ?
- ಕನ್ನಡಿಗ
Use Baraha fonts to read this blog.. http://www.baraha.com
Saturday, January 14, 2006
Subscribe to:
Post Comments (Atom)
3 comments:
howdu, howdu.
-Vikas Kamat
ಭೈರಪ್ಪನವರು ಉತ್ತಮ ಕಾದಂಬರಿಕರರು ಎನ್ನುವುದರಲ್ಲಿ ಸ೦ಶಯವೇ ಇಲ್ಲ. ನಾನು ಬಹುತೇಕವಾಗಿ ಅವರ ಎಲ್ಲ ಕಾದಂಬರಿಗಳನ್ನು ಓದಿದ್ದೇನೆ, ಆನ೦ದಿಸಿದ್ದೇನೆ. ಆದರೂ, ನನಗೆ ಅವರ ಎಲ್ಲಾ ವೈಚಾರಿಕ ಕಾದಂಬರಿಗಳಿಗಿ೦ತ ಅವರ – ‘ಗ್ರಹಭ೦ಗ’ ಕಾದ೦ಬರಿಯೇ ಹೆಚ್ಚು ಇಷ್ಟವಾದದ್ದು. ಅವರು ಕನ್ನಡದ ಒಬ್ಬ ಉತ್ತಮ ಬರಹಗಾರರಲ್ಲಿ ಒಬ್ಬರು ಎನ್ನುವುದರಲ್ಲಿ ಸ೦ಶಯವೇ ಇಲ್ಲ. ಅವರಿಗೆ ಪ್ರಶಸ್ತಿ ಸ೦ದಿದ್ದು ತು೦ಬಾ ಸ೦ತೋಷದ ವಿಷಯ.
- ಪ್ರಶಾ೦ತ
Houdu.. naanu bhyrappanavara abhimaani :)
dharmashree, daatu nannalli aneka vicharagalige spoortiyaadavu :)
Post a Comment