ಆಗೋವರೆಗೆ ಅಣ್ಣರಾಯ, ಆದಮೇಲೆ ದೊಣ್ಣೆರಾಯ..
ಇದು ಬರೀ ಕನ್ನಡಿಗರ ಕಥೆಯಲ್ಲ, ಪ್ರಜಾಪ್ರಭುತ್ವ ಪಾಲಿಸುವ ಹೆಚ್ಚಿನ ಎಲ್ಲ ರಾಜ್ಯ, ರಾಷ್ಟ್ರಗಳ ವ್ಯಥೆ. ಸಾಮಾನ್ಯವಾಗಿ ಪ್ರತಿಯೊಂದು ದೇಶದ ನಾಗರಿಕರು ರಾಜಕಾರಣಿಗಳನ್ನು ದ್ವೇಷಿಸುತ್ತಾರೆ. ಎಷ್ಟರ ಮಟ್ಟಿಗೆಂದರೆ, ಯಾವುದೇ ತರಗತಿಯ ವಿದ್ಯಾರ್ಥಿಯನ್ನು ನೀವು "ದೊಡ್ಡವನಾದ ಮೇಲೆ ಏನಾಗ್ತೀಯಾ?" ಅಂತ ಕೇಳಿದರೆ ಅವನು/ಅವಳು ಮುಂದೆ ಉತ್ತಮ ರಾಜಕಾರಣಿಯಾಗುತ್ತೇನೆ ಎಂದು ಹೇಳುವ ಸಂಭವ ತುಂಬಾ ಕಡಿಮೆ. ಯಾರೂ ಕೂಡಾ ಘನ ಉದ್ದೇಶ ಹೊತ್ತು ರಾಜಕಾರಣಿಯಾಗುವುದಿಲ್ಲ, ವಂಶಪಾರಂಪರ್ಯ ಅಥವಾ ಕೆಳಮಟ್ಟದ ರಾಜಕೀಯದಿಂದ ಬರುವ ಮಂದಿಯೇ ಹೆಚ್ಚು. ಇನ್ನು ಕೆಲವರು ಸಾಕಷ್ಟು ಗಳಿಸಿಯಾದ ಮೇಲೆ ಹಿಂದಿನ ಬಾಗಿಲಿನಿಂದ (ವಿಧಾನ ಪರಿಷತ್ತು ಅಥವಾ ರಾಜ್ಯಸಭೆ) ಒಳಬರುತ್ತಾರೆ. ಆದರೆ ಇವರು ಸುಮ್ಮನೆ "ಪ್ರೆಸ್ಟೀಜ್"ಗಾಗಿ ಬಂದವರು; ಅವರಿಂದ ಅನುಕೂಲವೇನಿಲ್ಲದಿದ್ದರೂ ಅಪಾಯವೂ ಕಮ್ಮಿ.
ಸನ್ನಿವೇಶವೇ ಹೀಗಿರುವಾಗ ನಮ್ಮ ಮಣ್ಣಿನ ಮೊಮ್ಮಗ, ಕುಮಾರಸ್ವಾಮಿ ವಂಶಪಾರಂಪರ್ಯವಾಗಿ ಬಂದ ಅವಕಾಶ, ರಕ್ತಗತವಾಗಿ ಬಂದ ರಾಜಕೀಯ ದಾಳಗಳನ್ನು ಬಳಸಿದರೆ ತಪ್ಪೇನು? ಈಗ ನಡೆದಿರುವುದರಲ್ಲಿ ಅತಿಶಯವೇನೂ ಇಲ್ಲ, ಇದು ದಶಕಗಳ ಹಿಂದೆ ಇದೇ ಮರಿಗಳ ಅಪ್ಪಂದಿರು ಬಳಸಿದ ತಂತ್ರವೇ. ಇನ್ನು ಕನ್ನಡಿಗರ ಮಟ್ಟಿಗೆ ಬಂದರೆ, ಆಯ್ಕೆ ಇರುವುದು ಕುರುಡುಗಣ್ಣು ಕುಂಟುಗಾಲಿನ ನಡುವೆ; ಕಾಸೂ ಹಾಳು ತಲೆಯೂ ಬೋಳು.
ಏನೇ ಇರಲಿ, ಸದ್ಯ ಬದಲಾವಣೆಯ ಗಾಳಿ ಬೀಸುತ್ತಿದೆ, ಅದೇ "ವ್ಯಾಯಾಮ-ದ್ವೇಷಿ" ಧರಂರನ್ನು ನೋಡಿ ಬೇಸತ್ತಿದ್ದ ಜನರಿಗೆ ಹೊಸ ಪಾತ್ರಧಾರಿ ನೋಡುವ ಅವಕಾಶ. ಎಲ್ಲ ಬದಲಾವಣೆಗಳಂತೆ ಈ ಬದಲಾವಣೆ ಕೂಡಾ ಭರವಸೆಯ ಬೆಳಕು ತಂದಿದೆ. ಯಾರಿಗೆ ಗೊತ್ತು, ಇದೇ ಸರ್ಕಾರ ನಮ್ಮ ಜನಹಿತ ಕಾಯಬಹುದು, ಬಯಸುವುದರಲ್ಲಿ ಹೋಗುವ ಗಂಟೇನಿದೆ? ಗಾಳಿ ಎತ್ತ ಕಡೆ ಬೀಸಿದರೂ ನನ್ನ ಅಂದಾಜಿನ ಪ್ರಕಾರ ಕೊನೆಯಲ್ಲಿ ಕಾಂಗ್ರೆಸ್ಸಿಗೇ ಲಾಭವಾಗಬಹುದು. ಒಂದೈದು ಶಾಸಕರಿದ್ದರೆ ಕೈ ನೋಡುತ್ತಿದ್ದೆ, ಎಂದು ಪಕ್ಷಾಂತರಿ "ಬಂ" ಕೈ ಹಿಚುತ್ತಿದ್ದರೆ, ನನ್ನ ಗತಿ ಏನು ಎಂದು ರಾಜಶೇಖರ ಮೂರ್ತಿಯಂತವರು ಕಣ್ ಕಣ್ ಬಿಡುವಂತಾಗಿದೆ. ಸದ್ಯ, ಚಡ್ಡಿ ಹಾಕಿ ಧ್ವಜ ಪ್ರಣಾಮ ಮಾಡಿ ಜೀವನ ಕಳೆದದ್ದು ಸಾರ್ಥಕವಾಗಿ ನಮ್ಮ ಯಡಿಯೂರಪ್ಪನವರು ಆಡಳಿತ ಪಕ್ಷದ ಕುರ್ಚಿಯ ಮೆತ್ತೆಯನ್ನು ನೋಡುವಂತಾದರೆ ಅರಳಿದ ಕಮಲ ಧನ್ಯ.
ಇವರು ಏನೇ ಮಾಡಲಿ, ನನ್ನ ಸಂದಿಗ್ಧತೆ ಏನೆಂದರೆ, ಸದ್ಯ ಚುನಾವಣೆ ಆದರೆ ಬರುವ ಖರ್ಚು ಹೆಚ್ಚೋ ಅಥವಾ ಚುನಾವಣಾ ಪ್ರಚಾರದಿಂದ ಬರುವ ಉದ್ಯೋಗ ಭರವಸೆ ಹೆಚ್ಚೋ? ನಿಮ್ಮ ಆಯ್ಕೆ ಏನು?
- ಕನ್ನಡಿಗ
Use Baraha fonts to read this blog.. http://www.baraha.com
Thursday, January 19, 2006
Subscribe to:
Post Comments (Atom)
1 comment:
ಕುಮಾರ ಸಂಭವ ನಾಟಕ ಪೂರ್ಣವಾಗುವ ಮುನ್ನವೇ, ಧರಂ ಸಿಂಗರ ವೈಯುಕ್ತಿಕ ಸಾಧನೆಯನ್ನು "ವೆಲ್ ಡನ್" ಎನ್ನುವ ಬದಲು, "ವ್ಯಾಯಾಮ ದ್ವೇಷ"ವೆನ್ನುವುದನ್ನು ನಮ್ಮ ಪತ್ರಿಕೆ ತೀವ್ರವಾಗಿ ಖಂಡಿಸುತ್ತದೆ.
ವಿ.ವಿ.
ಮಜಾವಾಣಿ ಸಂಪಾದಕ
Post a Comment