ಹರಿಯುವ ನೀರಿನ ದೊಣ್ಣೆ ನಾಯಕರು
ಸುಮಾರು ಹದಿನೈದು ವರುಷಗಳ ಹಿಂದಿನ ಕಥೆ. ನಮ್ಮ ಓಣಿಯಲ್ಲೇ ಸ್ಥಿತಿವಂತರಾಗಿದ್ದ ಕುಟುಂಬವೊಂದು ಹೊಸದಾಗಿ ವಿಡಿಯೊಕಾನ್ ಕಲರ್ ಟಿವಿ ತಂದಿತ್ತು. ಆಗ ಇಡೀ ಊರಿನಲ್ಲೇ ಬೆರಳೆಣಿಕೆಯಷ್ಟು ಟಿವಿಗಳಿದ್ದವಷ್ಟೆ. ಅಂಥಾದರಲ್ಲಿ ನಮ್ಮ ಓಣಿಗೇ ಒಂದು ಟಿವಿ ಬಂದರೆ ಹೇಗಾಗಿರಬೇಡ. ನೆರೆಹೊರೆಯ ಎಲ್ಲ ಕುಟುಂಬಗಳೂ ಸಂಭ್ರಮಿಸಿದ್ದವು, ಅಷ್ಟೇ ಅಲ್ಲ, ಮೊದಲ ಬಾರಿಗೆ ಟಿವಿ ಆನ್ ಮಾಡುವಾಗ ಒಂದು ಪೂಜೆ ಕೂಡ ನೆರವೇರಿತು.
ಜಾಗತೀಕರಣದ ಈ ದಿನಗಳಲ್ಲಿ ಅಂದಿನ ಆ ಆನಂದ, ಸಂಭ್ರಮ ನೆನಸಿಕೊಂಡರೆ ನನಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಆದರೆ ಈ ಮೇಲಿನ ಘಟನೆ ೧೯೮೦-೮೫ ರ ನಡುವೆ ನಮ್ಮ ದೇಶದ ಪ್ರತಿ ಊರಲ್ಲೂ ನಡೆದಿದೆ ಎಂದು ನಾನು ನಂಬುತ್ತೇನೆ. ಭಾರತದಂಥ ದೇಶ ನಾಯಕರ ಸಂಕುಚಿತ ಬುದ್ಧಿ, ದೂರದೃಷ್ಟಿಯ ಕೊರತೆಯಿಂದ ಎಷ್ಟೇ ಬಳಲುತ್ತಿರಬಹುದು. ಆದರೆ ತಂತ್ರಜ್ಞಾನದ ಒಂದು ಅಲೆ ಕ್ರಾಂತಿಯನ್ನೇ ಮಾಡಬಲ್ಲದು ಹಾಗೂ ಅದರ ಪರಿಣಾಮ ನಿರಂತರ.
ಕಾಲವನ್ನೊಮ್ಮೆ ಅವಲೋಕಿಸಿದರೆ ವಿಶ್ವದ ಆರ್ಥಿಕತೆಯಲ್ಲಿ ಒಂದು ಚಕ್ರವನ್ನು ಕಾಣಬಹುದು. ಅಂಥ ಹಲವಾರು ಕ್ರಾಂತಿ ಚಕ್ರಗಳನ್ನು ಭಾರತ ಸ್ವಾಗತಿಸಲಿಲ್ಲ. ಅದಕ್ಕೆ ಕಾರಣ ಆಡಳಿತಾರೂಢ ನಮ್ಮ ನಾಯಕರು. ಅವರ ನೇತೃತ್ವದಲ್ಲಿ ಸ್ವಾತಂತ್ರ್ಯಾನಂತರ ಭಾರತ ರಷ್ಯಾವನ್ನು, ಅದರ ಸಮಾಜವಾದವನ್ನು ಹಿಂಬಾಲಿಸಿತು. ಸಹಜವಾಗಿ ಐವತ್ತು ವರುಷಗಳಲ್ಲಿ ನಾವು ಆ ನಿರ್ಧಾರದ ಫಲಶ್ರುತಿಯನ್ನು ಕಾಣಬಹುದು. ದಿವಾಳಿಯೆದ್ದಿರುವ ರಷ್ಯನ್ ಒಕ್ಕೂಟದ ರಾಷ್ಟ್ರಗಳು ಭಾರತದ ಅವಳಿ ತಮ್ಮಂದಿರಂತಿವೆ. ಕಾರಣ ಸ್ಪಷ್ಟ; ಸಮಾನತೆ, ಸಾಮಾಜಿಕ ನ್ಯಾಯ ಇತ್ಯಾದಿಗಳು ಭಾಷಣದ, ಪುಸ್ತಕದ ವಸ್ತುಗಳೇ ಹೊರತು ವಾಸ್ತವದ ಸತ್ಯಗಳಲ್ಲ. ಸಮಾಜವಾದದ ತತ್ವದಂತೆ ಮಾನವ ಮೂಲತ: ಸಂಘಜೀವಿಯಾದರೂ, ಮೂಲ ಪ್ರಕೃತಿಯ ಸಿದ್ಧಾಂತ ಬೇರೆ; ಯೋಗ್ಯತೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಆಯ್ಕೆ. ಬಂಡವಾಳಶಾಹಿ ರಾಷ್ಟ್ರಗಳು ಅನುಸರಿಸುವುದು ಅದನ್ನೇ. ಸಹಜವಾಗಿ ಸಮಾಜವಾದದ ತತ್ವ ಸಿದ್ಧಾಂತಗಳು ಅವನತಿ ಹೊಂದಿದರೆ ಬಂಡವಾಳಶಾಹಿಗಳು ಬದುಕಿದರು. ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಕಾಲ ನಿರ್ಧರಿಸುತ್ತದೆ, ನಮ್ಮ ರಾಜಕಾರಣಿಗಳು ದೊಣ್ಣೆ ನಾಯಕರಾಗುವ ಅವಶ್ಯಕತೆಯಿಲ್ಲ.
ಭಾರತದಂಥ ದೇಶಕ್ಕೂ ಆಸರೆಯಿತ್ತು. ತೊಂಬತ್ತರ ದಶಕದ ಆದಿಯಲ್ಲಿ, ಪರಿಸ್ಥಿತಿಯ ಕೈವಾಡದಿಂದಾಗಿ ಬದಲಾವಣೆಯ ಕಾಲ ಬಂದಿತ್ತು. ಅಷ್ಟೇ ಅಲ್ಲ, ಆಗ ಬಂದಿದ್ದ ಮಾಹಿತಿ ತಂತ್ರಜ್ಞಾನಕ್ಕೆ ನಮ್ಮ ನೇತಾಗಳ ಅವಶ್ಯಕತೆಯಿರಲಿಲ್ಲ. ಅವರ ಗೃಹಿಕೆಗೆ ಬರುವಷ್ಟರಲ್ಲಿ ಎಲ್ಲ ಮುಗಿದಿತ್ತು. ಅದರ ಪರಿಣಾಮ: ದೇಸೀ ಬ್ಯಾಂಕುಗಳು, ಸರ್ಕಾರಿ ಕಂಪನಿಗಳಲ್ಲಿ ಯಾರೂ ಪರಿಚಿತರಿಲ್ಲದಿದ್ದಲ್ಲಿ ನಿರುದ್ಯೋಗವೇ ಗತಿಯಾಗಿದ್ದ ನಮ್ಮ ಯುವಕರಿಗೆ ಜೀವನ ಮಾರ್ಗ ಸೃಷ್ಟಿಯಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಾಗಿದ್ದ ನಮ್ಮ ಅಂಬಾಸಡರ್, ಬಜಾಜ್ ಚೇತಕ್ ಗಳ ಅಸಲಿ ಬಂಡವಾಳ ಹೊರಬಿತ್ತು. ಇಂದು ನಾನು ಇದನ್ನೆಲ್ಲ ಬರೆದರೆ ಸಿನಿಕತನ ಅನಿಸಬಹುದು. ನಿಮ್ಮ ಮನೆಯಲ್ಲಿ ಸೀನಿಯರ್ ಚಿಕ್ಕಪ್ಪನೋ, ಅಣ್ಣನೋ ಇದ್ದರೆ ಕೇಳಿ ನೋಡಿ, ತಪ್ಪಿದ್ದರೆ ತಿದ್ದಿ.
ಬದಲಾದ ಕಾಲ: ರಸ್ತೆ ಸರಿಯಿಲ್ಲದಿದ್ದರೆ ಅದು ಅಂತರಾಷ್ಟ್ರೀಯ ಸುದ್ದಿಯಾಗುತ್ತದೆ, ಆಳುವ ಸರ್ಕಾರ ಕಡೆ ಪಕ್ಷ ಸ್ಪಷ್ಟನೆ ನೀಡುತ್ತದೆ. ದಬ್ಬಣ ಚುಚ್ಚಿದರೂ ಸ್ಪಂದಿಸದ ನಮ್ಮ ದಪ್ಪ ಚರ್ಮದ ಸರ್ಕಾರದಿಂದ ಇದು ಸಾಧ್ಯವಾಗಿದ್ದರೆ ಕಾಲಾಯ ತಸ್ಮೈ ನಮ:
- ಕನ್ನಡಿಗ
Use Baraha fonts to read this blog.. http://www.baraha.com
Wednesday, January 11, 2006
Subscribe to:
Post Comments (Atom)
2 comments:
One big problem with Communism and Socialism is that both of them have no faith in the goodness of human beings.
Whether it's naive or wrong, the essence of Capitalism is that economic freedom is good for the humans.
A very good post! And a very well presented blog!!
Post a Comment