Use Baraha fonts to read this blog.. http://www.baraha.com

Sunday, January 22, 2006

Face To Face with Maa. Mu.

ಮಾ. ಮು. ಧರ್ಮೂದಾದಾರೊಂದಿಗೆ "ಉಗಿಬಂಡಿ" ವರದಿಗಾರನ ಸಂದರ್ಶನ

ಮೊನ್ನೆ ಜೀವರ್ಗಿಯಲ್ಲಿ ಸಂತೆಪೇಟೆಯಲ್ಲಿ ನಡೆದು ಹೋಗುತ್ತಿರುವಾಗ ಗರಡಿಮನೆ ಹತ್ರ ಒಂದು ಗೂಟದ ಬಿಳಿ ಕಾರ್ (ಅಂಬಾಸಡರ್) ನಿಂತಿತ್ತು. ಎಲಾ, ಗರಡಿಮನೆಗೂ ಕಾರಲ್ಲಿ ಬರೋ ಕಾಲ ಬಂತಾ. ಯಾರಿರಬಹುದು ಎಂದು ಕುತೂಹಲದಿಂದ ಒಳನಡೆದು ಕೇಳಿದಾಗ ತಿಳಿದಿದ್ದು; ನಮ್ಮ ಮಾ ಮು ಧರಂಸಿಂಗ್ ರವರು ಈಗ ಬೆಂಗಳೂರಿನ ಸಹವಾಸ ಬಿಟ್ಟು ಈ ಶಾಲೆ ಸೇರಿದ್ದಾರೆ. ಯಾವಾಗ ಗೌಡರು ತಮ್ಮ ರಾಜಕೀಯ ಪಟ್ಟಿನಿಂದ ಯಾಮಾರಿಸಿದರೋ ಆಗಲೇ ನಮ್ಮ ಧರಂದಾದಾ ನಿರ್ಧರಿಸಿದರು, "ದೋಸ್ತಿ ಸರಕಾರದಲ್ಲಿ ಕುಸ್ತಿ ಆಡಬೇಕಂದ್ರ ಹೊಸಾ ಪಟ್ಟು ಕಲೀಲೇ ಬೇಕು, old dog can learn new tricks ಅಂತ ಗಾದೆ ಮಾತೆ ಇರೋವಾಗ ನಾನು ಕಲಿಯೋದು ಯಾವ ಮಹಾ".
ಈ ಮಧ್ಯೆ ನಮ್ಮ "ಉಗಿಬಂಡಿ" ಸಂಪಾದಕರು ಒಂದು ವಾರದಿಂದ ಗಂಟು ಬಿದ್ದಿದ್ರು, ಏನು ಇತ್ತೀಚೆಗೆ ಬರೀತಾನೆ ಇಲ್ಲ, ಪೆನ್ನಲ್ಲಿ ಶಾಯಿ ಖರ್ಚಾಗಿದ್ಯಾ ಅಂತ. ಇಂಥಾ ಸುದ್ದಿ ಸಿಕ್ರೆ ಬಿಡೋರುಂಟಾ? ಬೇರೆ ಪೇಪರ್ನವರು ಬಂದು ಈ ಸುದ್ದಿ ಪಬ್ಲಿಶ್ ಮಾಡೋ ಮೊದಲು ನಾನೇ ಬರೆದ್ರೆ ಒಳ್ಳೇದು ಅಂತ ತೀರ್ಮಾನಿಸಿ ಒಂದು ಸಂದರ್ಶನದ ಅವಕಾಶ ಕೋರಿಯೇ ಬಿಟ್ಟೆ. ನಮ್ಮ ಧರಂದಾದ ಅವರ ದೇಹ ಎಷ್ಟು ದೊಡ್ಡದೋ ಹೃದಯವೂ ಅಷ್ಟೇ ವಿಶಾಲವಾದದ್ದು, ಇಲ್ಲ ಅನ್ನಲಿಲ್ಲ. ಸಮಸ್ಯೆ ಶುರುವಾದದ್ದೇ ಅಲ್ಲಿ, ರಾಗಿ ಮುದ್ದೆ ನಾಡಲ್ಲಿ ಬೆಳೆದ ನಂಗೆ ಜೋಳದ ರೊಟ್ಟಿ ಭಾಷೆ ಸ್ವಲ್ಪ ಕಷ್ಟ. ಆದರೆ ಕಾಕತಾಳೀಯವೆಂಬಂತೆ "ನೂರೆಂಟು ಸುಳ್ಳು" ವರದಿಗಾರ ಸಂಜಯ ಅಲ್ಲೇ ಬಂದ್ರು. ಕನ್ನಡದ ಬಹುಶೈಲಿ ಕೋವಿದರಾದ ಅವರಿಗೆ ಇದು ಸಮಸ್ಯೆಯಲ್ಲ. "ಕಾರ್ಯವಾಸಿ ಕತ್ತೆಕಾಲು ಕಟ್ಟು" ಎಂಬಂತೆ ನಾನು ವೃತ್ತಿದ್ವೇಷಗಳನ್ನು ಬದಿಗೊತ್ತಿ, ಅಚ್ಚ ಇಂಗ್ಲೀಷಲ್ಲಿ ಅವರ ಸಹಾಯ ಕೇಳಿಬಿಟ್ಟೆ. ಬೇರೆ ಭಾಷೆಯಲ್ಲಿ ಸಹಾಯ ಕೇಳಿದಾಗ ಇಲ್ಲ ಅನ್ನುವ ಕನ್ನಡಿಗರನ್ನು ನಾನು ನೋಡೇ ಇಲ್ಲ. ಓಕೆ ಅಂತ ಅಂದ್ರು ನಮ್ಮ ಸಂಜಯ.
ಸರಿ, ನಮ್ಮ ಸಂದರ್ಶನ ಶುರು ಆಯ್ತು, ಸಾಕಷ್ಟು ಮಾತುಗಳು off the record ಇದ್ವು, ಅವನ್ನೆಲ್ಲ ತೆಗೆದು ಉಳಿದ ಸಂಭಾಷಣೆಗಳನ್ನು ನಿಮಗಾಗಿ ಇಲ್ಲಿ ಪ್ರಕಟಿಸಿದ್ದೇವೆ, ಎಂಜಾಯ್ ಮಾಡಿ.
ನಾನು: ನಮ್ಮ ಮಣ್ಣಿನ ಮಗ ನಿಮ್ಮನ್ನೇ ಯಾಮಾರಿಸಿದ್ರಲ್ಲ, ಆಗ ಗುಪ್ತದಳ ಅಕ್ಕಿ ತೌಡು ಜಗೀತಾ ಇತ್ತಾ?
ಧರಂ: ಇಲ್ಲ, ಹಾಗೇನಿಲ್ಲ ನಮ್ಮ ಮಣ್ಣಿನ ಮಗನೇ ಯಾಮಾರಿದ್ದು, ನಂಗೆ ಗುಪ್ತದಳದವರು ಸುದ್ದಿ ತಂದ್ರು. ನಾನು ಈ ಮಣ್ಣಿನ ಮೊಮ್ಮಗ ಏನಾದ್ರೂ ಕಿತಾಪತಿ ಮಾಡ್ತಾನಾ ಅಂತ ಕೇಳ್ದೆ, ಆದ್ರೆ ಮಣ್ಣಿನ ಮಗ ನಂಬಲಿಲ್ಲ. ಏನೂ ಯೋಚ್ನೆ ಮಾಡಬೇಡಿ, ಸುಮ್ನೆ ಹೊಸ ವರ್ಷ ಆಚರಿಸಕ್ಕೆ ರೆಸಾರ್ಟಿಗೆ ಹೋಗಿದಾನೆ ಅಂದ್ರು. ಇರಬಹುದು, ಈಗಿನವರೇ ಹಂಗೆ, ಒಂದು ಹಬ್ಬನ ಮುಂದಿನ ವರ್ಷದವರೆಗೂ ಆಚರಿಸ್ತಾರೆ. ನೋಡಿ ನಮ್ಮ ಗಣೇಶ ಹಬ್ಬ, ರಾಜ್ಯೋತ್ಸವ ಎಲ್ಲಾ ತಿಂಗಳುಗಟ್ಟಲೆ ನಡೆಯಲ್ವಾ ಹಂಗೆ ಇವರು ನ್ಯೂ ಇಯರ್ ಆಚರಿಸ್ತಾ ಇದಾರೆ ಅಂತ ತಿಳ್ಕೊಂಡೆ.
ನಾನು: ಅದು ಸರಿ, ನೀವು ಮೊದಲೇ ಸ್ವಲ್ಪ ನೇರ ನಡೆಯವರು, ನೀವು ಹಳ್ಳಕ್ಕೆ ಬಿದ್ದಿದ್ದರಲ್ಲಿ ಆಶ್ಚರ್ಯ ಇಲ್ಲ ಬಿಡಿ, ಆದ್ರೆ ಈ ಬಿಜೆಪಿಯವರು ಎಂತಾ ಹಲ್ಕಾ ನೋಡಿ, ಬೇರೆಯವರ ಚಟ್ಟದ ಬೆಂಕೀಲಿ ಬೀಡಿ ಹಚ್ಚಕ್ಕೆ ನೋಡ್ತಾ ಇದಾರೆ.
ಧರಂ: ಛೆ, ನಂಗೆ ಬಿಜೆಪಿಯವರ ಮೇಲೆ ಬೇಸರ ಏನಿಲ್ಲ ಬಿಡಿ, ಅವರ ಸ್ಥಾನದಲ್ಲಿ ಯಾರೇ ಇದ್ರು ಹಾಗೇ ಮಾಡ್ತಿದ್ರು. ಹಂಗೆ ನೋಡಿದ್ರೆ ನಾವು ಮಣ್ಣಿನ ಮಗಂಗೆ ಪ್ರಧಾನಿಯಾಗಿದ್ದಾಗ ನಮ್ಮ ಪಕ್ಷದ ಚಿಹ್ನೆ (ಕೈ) ಕೊಟ್ಟಿರಲಿಲ್ಲ್ವಾ? ಇನ್ನು ಬಿಜೆಪಿಯವರದ್ದು ತುಂಬಾ ಕಷ್ಟ, ಅವರಿಗೆ ನಮ್ಮಂಗೆ ಚಾನ್ಸ್ ಇಲ್ಲಾ. ನಾವಾದ್ರೆ ಯಾವ ಪಕ್ಷ ಅಧಿಕಾರಕ್ಕೆ ಬಂತೋ ಅಲ್ಲಿಗೆ ಜಂಪ್ ಹೊಡಿಬಹುದು. ಉದಾಹರಣೆಗೆ ನಮ್ಮ ದೇಶಪಾಂಡೆಯವರನ್ನು ನೋಡಿ ಯಾವ ಪಾರ್ಟಿ ಅಧಿಕಾರಕ್ಕೆ ಬಂದ್ರೂ ಅವ್ರು ಮಾತ್ರ ಮಿನಿಸ್ಟರೇ. ಅವರು ವಿಧಾನಸೌಧದಲ್ಲಿ ಒಂದು ರೂಮ್ ಖಾಯಂ ಆಗಿ ರಿಸರ್ವ್ ಮಾಡಿದಾರೆ ಗೊತ್ತಾ? ನಾವು ಚುನಾವಣೇಲಿ ಮಾತ್ರ ಬೇರೆ, ಇಲ್ಲಾಂದ್ರೆ ಎಲ್ಲಾ ಜಾತ್ಯಾತೀತರೆ, ಬಿಜೆಪಿಯವರಿಗೆ ಆ ಅವಕಾಶ ಇಲ್ಲಾ ನೋಡಿ ಅದಕ್ಕೆ ಬೇಳೆ ಬೇಯಿಸ್ತಾ ಇದಾರೆ.
ನಾನು: ಒಟ್ಟಿನಲ್ಲಿ ಕಾಂಗ್ರೆಸ್ಸಿಗೆ ನಷ್ಟ ಆಯ್ತು ಬಿಡಿ
ಧರಂ: ಇಲ್ಲಿ ಪಾರ್ಟಿಗೆ ನಷ್ಟದ ಪ್ರಶ್ನೆಯೇ ಇಲ್ಲ, ಹೆಂಗಿದ್ರೂ ಇವ್ರು ಕಚ್ಚಾಡ್ತಾರೆ, ಬೇಜಾರಾಗಿ ನಮ್ಮ ಜನ ಮುಂದಿನ ಎಲೆಕ್ಶನ್ ನಲ್ಲಿ ನಮಗೇ ವೋಟು ಹಾಕೋದು. ನಿಜವಾಗಲೂ ನಷ್ಟ ಆಗಿದ್ದು ನಂಗೆ. ಯಾವಾಗ ಆ ಹೈದರಾಬಾದ್ ಬಾಬಾ ಆಶ್ರಮಕ್ಕೆ ಭೇಟಿ ಕೊಟ್ನೊ ಆ ಬಾಬಾನ ಪಾಪವೆಲ್ಲಾ ನಂಗೆ ಅಂಟುಕೊಡು ಬಿಡ್ತು. ನೋಡಿ, ಆವತ್ತು ಅವರ ಆಶೀರ್ವಾದ ತಗೊಂಡು ಕಾರು ಹತ್ತಿದ್ನೋ ಇಲ್ವೋ ಕಾರ್ ಟೈರ್ ಪಂಕ್ಚರ್. ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ಹರಕೆ ತೀರಿಸ್ದೆ. ಕಲ್ಲು ದೇವರೇ ವಾಸಿ, ತನ್ನ ಪಾಪಾನೆಲ್ಲ ಆಶೀರ್ವಾದದ ತರಾ ಕೊಡಲ್ಲ. ಎಲ್ಲಾ ನನ್ನ ಕರ್ಮ ಬಿಡಿ. ಯೋಜನಾ ಆಯೋಗದವರೂ ನಂಗೆ ವೆಲ್ ಡನ್ ಅಂತ ಹೇಳಿದ್ರು. ಆದ್ರೆ ಹೀಂಗಾಗೋಯ್ತು.
ನಾನು: ಹಾಗಾದ್ರೆ ನಿಮ್ಮ ಮುಂದಿನ ದಾರಿಯ ಯೋಚನೆ ಏನು?
ಧರಂ: ನಾನು ಮುಂಚಿಂದಲೂ ತೀರಾ ಯೋಚಿಸಿದವನೇ ಅಲ್ಲ, ಒಂಥರಾ ಕೂಲ್ ಪಾರ್ಟಿ, ನೋಡಿ ವಕೀಲನಾಗಿ ಲಾಟರಿ ಹೊಡಿಯೊಕ್ಕಿಂತ ವಾಸಿ ಅಂತ ರಾಜಕೀಯಕ್ಕೆ ಬಂದೆ, ಇಲ್ಲೇ ಮೂರು ದಶಕ ಕಳೆದು ಆಗಿದೆ. ಏನೋ, ಇಡೀ ಕರ್ನಾಟಕನೂ ಕೂಡಾ ನಮ್ ಗುಲ್ಬರ್ಗಾದ ಥರಾ ಇರ್ಲಿ ಅಂತ ನನ್ನ ಆಸೆ. ಗುಲ್ಬರ್ಗಾದ ಥರಾ ಹಿಂದಿನ ಆಚಾರ, ವಿಚಾರ ಕಾಪಾಡಿಕೊಂಡು ಬಂದಿರೋ ಜಿಲ್ಲೆಗಳು ಕಮ್ಮಿ, ಇವತ್ತಿಗೂ ಇಲ್ಲಿಯವರು ಚಕ್ಕಡಿಗಾಡಿ ಅಥವಾ ನಡೆದೇ ಓಡಾಡ್ತಾರೆ. ಕೆಲವು ಹಳ್ಳಿಗಳು ಬಸ್ಸೇ ನೋಡಿಲ್ಲ, ಎಲ್ಲಾ ಕಡೆ ಹೀಂಗೆ ಇದ್ರೆ ಭೇಸು ಇರ್ತಿತ್ತು. ಮನುಷ್ಯನ ಆಸೆಗೆ ಮಿತಿನೇ ಇರಲ್ಲ, ಇವತ್ತು ರೋಡು ಅಂತಾರೆ, ನಾಳೆ ನೀರು, ಮನೆ ಅಂತಾರೆ, ಅದಕ್ಕೆ ಹೇಳೋದು, ಯಾವುದೂ ಬೇಡ ಅಂತ ನಮ್ಮ ಹಿರಿಯರು ಮಾಡಿಟ್ಟ ಕಾಲುದಾರೀಲೇ ಇದ್ರೆ ವಾಸಿ. ನನ್ನ ಮುಂದಿನ ದಾರಿ ಸಿಂಪಲ್, ಈ ಗರಡಿ ಮನೇಲಿ ಹೊಸ ಪಟ್ಟು ಕಲೀತಿನಿ, ರೊಟ್ಟಿ ಕಡೀತೀನಿ. ಮಗಂಗೂ ಹೇಳ್ತಾ ಇದೀನಿ ವಂಶಪರಂಪರೆ ಕಾಪಾಡು, ಮಣ್ಣಿನ ಮೊಮ್ಮಗನ ಥರಾ ಅಧಿಕಾರ ತಗೋ ಅಂತ.
ನಾನು: ರಾಜಕೀಯ ನಿವೃತ್ತಿಯ ಆಲೋಚನೆ ಇದ್ಯಾ ನಿಮಗೆ?
ಧರಂ: ರಾಜಕೀಯದಿಂದ ನಿವೃತ್ತಿ? ಹಂಗಂದ್ರೆ ಹೆಂಗೆ, ರಾಜಕೀಯ ಅನ್ನೋದು ವೃತ್ತಿಯಲ್ಲ ನಿವೃತ್ತಿಯಾಗೋಕೆ. ಅದೆಲ್ಲಾ ಬೇರೆ ದೇಶಗಳಲ್ಲಿ ಇರಬಹುದು. ನಮ್ಮಲ್ಲಿ ಎಲ್ಲ ರಾಜಕಾರಣಿಗಳೂ ಸಾಯೋವರೆಗೂ ನಾಯಕರೆ; ಪೆನ್ಶನ್ ಯಾಕೆ ನಮಗೆ ಅಂತ ನಂಗೆ ಕೆಲವು ಬಾರಿ ಆಲೋಚನೆ ಬರ್ತದೆ.
ಇನ್ನೂ ಸಾಕಷ್ಟು ವಿಚಾರಗಳು ಚರ್ಚೆ ಆದವು, ಆದರೆ ಅವೆಲ್ಲಾ off the record ಆಗಿದ್ರಿಂದ ಇಲ್ಲಿ ನಾವು ಪ್ರಕಟಿಸಲಿಲ್ಲ. ನಿಮಗೆ ತಿಳಿಯುವ ಆಸಕ್ತಿ ಇದ್ದರೆ, ನಮ್ಮ ಪತ್ರಿಕಾಲಯ ಸಂಪರ್ಕಿಸಿ: http://kannadablogs.blogspot.com

- ಕನ್ನಡಿಗ

4 comments:

V.V. said...

ಮಾನ್ಯರೇ,

ನಮ್ಮ ಪತ್ರಿಕೆ ಸಂದರ್ಶಿಸುವ ಮುನ್ನವೇ ಧರಂ ಸಿಂಗ್ ರವರನ್ನು ಸಂದರ್ಶಿಸಿ ಸ್ಕೂಪ್ ಮಾಡಿದ್ದೀರಿ. ಅಭಿನಂದನೆಗಳು.

ನೂರೆಂಟು ಸುಳ್ಳಿನ ಸಂಜಯರವರಿಗೆ ಕತ್ತೆಯ ಕಾಲಿರುವುದು ತಿಳಿದು ಆಶ್ಚರ್ಯವಾಯಿತು. ಈ ಕುರಿತು ಹೆಚ್ಚಿನ ತನಿಖೆ ಮಾಡಿದ ನಮ್ಮ ವರದಿಗಾರರ ಪ್ರಕಾರ ಉಳಿದ ಅಂಗಗಳ ಕುರಿತು ಹೇಳಲು ಸಾಧ್ಯವಿಲ್ಲವಾದರೂ, ಕತ್ತೆಯ ಕಾಲಿರುವುದು ಅನುಮಾನಾಸ್ಪದ.

ವಂದನೆಗಳೊಂದಿಗೆ,

ವಿ.ವಿ.

ಸಂಪಾದಕ ಮಜಾವಾಣಿ

Anonymous said...

ವಿ ವಿ ಯವರಿಗೆ, ಧನ್ಯವಾದಗಳು. ಕನ್ನಡಿಗನ ಅಭಿಪ್ರಾಯದಂತೆ ಸಂಜಯರಿಗೆ ಕತ್ತೆ ಕಾಲಿದೆ ಎಂದಲ್ಲ. ಕಾರ್ಯಸಿದ್ಧಿಯಾಗುವಾಗ ಕತ್ತೆಯ ಕಾಲನ್ನು ಬೇಕಾದರೂ ಹಿಡಿ ಎಂದು ಗಾದೆಮಾತು ಇರುವಾಗ ಸಂಜಯರವರ ಸಹಾಯ ಕೇಳುವುದರಲ್ಲಿ ತಪ್ಪೇನೂ ಇಲ್ಲ ಎಂದು ಭಾವಿಸಿದ್ದು. ಸಂಜಯರವರ ಅನುವಾದದ ಸಹಾಯವಿಲ್ಲದೇ ಈ ಸಂದರ್ಶನ ಸಾಧ್ಯವಿರಲಿಲ್ಲ, ಅವರಿಗೆ "ಉಗಿಬಂಡಿ" ಆಭಾರಿಯಾಗಿರುತ್ತದೆ.

- ಕನ್ನಡಿಗ

Anonymous said...

ಅಂತರಜಾಲದಲ್ಲಿ ಕನ್ನಡಿಗ, ನೂರೆಂಟುಸುಳ್ಳು, ಮಜಾವಾಣಿ, ಇತ್ಯಾದಿ ಅದ್ಭುತ ಸಂಶೋಧನಾ ವರದಿ ತಾಣಗಳು ಸೇರ್ಪಡೆಯಾಗಿರುವುದರಿಂದ ಇನ್ನು ಕನ್ನಡದ ಪ್ರಪ್ರಥಮ ಅಂತರಜಾಲ ತಾಣ ವಿಶ್ವ ಕನ್ನಡದ ಅಗತ್ಯ ಇಲ್ಲ ಎಂದು ಅದರ ಸಂಪಾದಕರು ಗೊಣಗುವುದನ್ನು ನಾನು ಕೇಳಿದ್ದೇನೆ. ಅವರಿಗೆ ನಾನು ಏನು ಉತ್ತರಿಸಲಿ?

-ವಾಯುಪುತ್ರ

Anonymous said...

ಕನ್ನಡ ಅಂತರ್ಜಾಲ ತಾಣಗಳಲ್ಲಿ ಪ್ರಥಮ ಪೂಜೆಗೆ ಅರ್ಹಸ್ಥಾನದಲ್ಲಿರುವ ವಿಶ್ವ ಕನ್ನಡವು ಸರ್ವ ತಾಣಗಳಿಗೂ ಮಾದರಿಯಾಗಿದೆ; ಅದರ ಪಥದಲ್ಲಿ ಇನ್ನೂ ಅಂಬೆಗಾಲಿಕ್ಕುತ್ತಿರುವ "ಅವಲೋಕನ" ಹಾಗೂ "ಉಗಿಬಂಡಿ"ಯನ್ನು ಮೆಚ್ಚಿ ನುಡಿದ ಪವನಜರಿಗೆ "ಕನ್ನಡಿಗ" ಹಾಗೂ "ಉಗಿಬಂಡಿ"ಯ ಸಂಪಾದಕ ಮಂಡಳಿ ಆಭಾರಿಯಾಗಿರುತ್ತಾರೆ.

- ಕನ್ನಡಿಗ