ದಂತವೈದ್ಯೋ ನಾರಾಯಣೋ ಹರಿ:

ಪ್ರಾಮಾಣಿಕವಾಗಿ ಹೇಳುತ್ತೇನೆ; ಹತ್ತು ವರುಷಗಳ ಹಿಂದೆ ನನಗೆ ದಂತವೈದ್ಯ ವೃತ್ತಿಯ ಬಗ್ಗೆ ಉತ್ತಮ ಅಭಿಪ್ರಾಯವೇನೂ ಇರಲಿಲ್ಲ. ಭಗವಂತ ದಯಪಾಲಿಸಿದ ಹಲ್ಲುಗಳು ಇನ್ನೂ ಹೊಸದಾಗಿದ್ದವು. ದೂರದರ್ಶನದಲ್ಲಿ "ರಾಮಾಯಣ" ಧಾರಾವಾಹಿಯ ಮೊದಲು ಬರುತ್ತಿದ್ದ ಜಾಹೀರಾತಿನ ಸಲಹೆಯಂತೆ ಡಾಬರ್ ಕೆಂಪು ಹಲ್ಲುಪುಡಿ ಬಳಸಿ ನನ್ನ ಹಲ್ಲುಗಳನ್ನು ಬೆಳ್ಳಗೆ ಇರಿಸಿದ್ದೆ. ದಂತವೈದ್ಯರೆಂದರೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಂ ಬಿ ಬಿ ಎಸ್ ಸೀಟು ಸಿಗದ ನಿರಾಶಿಗಳು ಇಲ್ಲವೇ ಪಿತ್ರಾರ್ಜಿತವಾಗಿ ಬಂದಂಥ ದಂತವೈದ್ಯಾಲಯವಿದ್ದು ಅದರ ಮೂಲಕ ಉದರಂಭರಣಂ ಮಾಡುವ ಉದ್ದೇಶದಿಂದ ದಂತವೈದ್ಯ ವೃತ್ತಿಯನ್ನು ಪರಿಗಣಿಸಿದವರು ಎಂದು ನನ್ನ ದೃಢ ನಂಬಿಗೆಯಾಗಿತ್ತು. ಅಲ್ಲದೇ ನಾನು ಭೇಟಿ ನೀಡಿದ ಕೆಲ ದಂತ ವೈದ್ಯರ ಸಲಹೆ ಕೂಡಾ ನನಗೆ ರುಚಿಸಿರಲಿಲ್ಲ. ಸುಮ್ಮನೇ, ಹಲ್ಲಿನ ಜೊತೆಗೆ ಹಣವನ್ನೂ ಕೀಳುವ ವ್ಯವಸ್ಥೆ ಇವರದು ಎಂದು ಭಾವಿಸಿದ್ದೆ.
ಆನುವಂಶಿಕವಾಗಿ ನನ್ನದು ದಂತರೋಗಿಗಳ ಕುಟುಂಬ; ಅಪ್ಪನ ಒರಿಜಿನಲ್ ಹಲ್ಲುಗಳನ್ನೇ ನೋಡಿರದ ನಾನು ಅಮ್ಮನ ಹುಳುಕು ಉಬ್ಬುಹಲ್ಲುಗಳನ್ನು ನೋಡಿದ್ದೆ. ಹುಳುಕು ಹಲ್ಲಿನ ನೋವಿನಿಂದ ತಾವು ಪಟ್ಟ ಬವಣೆ, ನೋವು ಮಕ್ಕಳಿಗೆ ಬೇಡ ಎಂಬ ಸದುದ್ದೇಶದಿಂದ ನಮ್ಮನ್ನು ಮೊದಲಿನಿಂದಲೇ ಸರಿಯಾಗಿ ಹಲ್ಲುಜ್ಜುವ ಶಿಸ್ತಿಗೆ ಗುರಿಪಡಿಸಿದ್ದ ನನ್ನ ಹಿರಿಯರು ಆರೋಗ್ಯಕರ ದಂತ ಜೀವನಕ್ಕೆ ನಾಂದಿ ಹಾಡಿದ್ದರು. ಹೀಗಾಗಿ ವಾರ್ಷಿಕ ದಂತವೈದ್ಯರ ಭೇಟಿ ನಮ್ಮ ಅಭ್ಯಾಸವಾಗಿತ್ತು. ಹೀಗೇ ಒಂದು ವಾರ್ಷಿಕ ಭೇಟಿಯ ಸಂದರ್ಭದಲ್ಲಿ ದವಡೆಯ ಕೊನೆಯ ಹಲ್ಲನ್ನು ನೋಡಿದ ವೈದ್ಯರು "ಇದೇನು ಕೆಂಡದಂತೆ ಕಪ್ಪಾಗಿದೆಯಲ್ಲ? ನೋವಿದೆಯಾ?" ಎಂದು ಕೇಳಿದಾಗ ಬಾಯಲ್ಲಿ ಉತ್ತರಿಸಲಾಗದೇ ಇಲ್ಲವೆಂಬಂತೆ ತಲೆ ಅಲ್ಲಾಡಿಸಿದ್ದೆ. ಅದನ್ನು ಅವರು ನಂಬಲಿಲ್ಲ; ದಂತವೈದ್ಯಾಯುಧಗಳಲ್ಲೊಂದಾದ ಸಣ್ಣ ಸುತ್ತಿಗೆಯಂಥ ವಸ್ತುವಿನಲ್ಲಿ ಎರಡು ಬಾರಿ ಆ ಹಲ್ಲನ್ನು ಮೊಟಕಿ "ಈಗ?" ಎಂದು ಪುನ: ಕೇಳಿದರು. "ಇನ್ನೇನು? ಸುತ್ತಿಗೆಯಲ್ಲಿ ಮೊಟಕಿದರೆ ಎಂಥಾ ಹಲ್ಲೂ ನೋಯುತ್ತದೆ" ಎಂದು ಉತ್ತರಿಸುವ ಮನಸ್ಸಾದರೂ ವಾಸ್ತವದಲ್ಲಿ ನನಗೆ ನೋವಿರದಿದ್ದರಿಂದ "ನೋವೇನೂ ಇಲ್ಲ" ಎಂದು ತೆರೆದ ಬಾಯಲ್ಲೇ ಹಸನ್ಮುಖಿಯಾಗಿ ಸಂಜ್ಞೆ ನೀಡಿದ್ದೆ. ಇದರಿಂದ ತುಸು ನಿರಾಶೆಗೊಂಡಂತೆ ತೋರಿದರೂ, ವೃತ್ತಿ ಧರ್ಮದಂತೆ "ತೊಂದರೆಯೇನೂ ಇರದಿದ್ದರೆ ಹಾಗೇ ಇರಲಿ ಬಿಡಿ" ಎಂದು ಸಲಹೆ ನೀಡಿ "ಉಳಿದಂತೆ ಎಲ್ಲಾ ಚೆನ್ನಾಗಿದೆ, ಆದರೆ ಉಜ್ಜುವ ಕ್ರ್‍ಅಮ ಸ್ವಲ್ಪ ಬದಲಾದರೆ ಒಳ್ಳೆಯದು" ಎಂದು ಹದಿನೈದು ನಿಮಿಷ ಕೊರೆದಿದ್ದರು. ಈ ಘಟನೆ ದಂತವೈದ್ಯರ ಬಗೆಗಿನ ನನ್ನ ಅಭಿಪ್ರಾಯವನ್ನೇನೂ ಬದಲಿಸದಿದ್ದರೂ ತುಸು ಉತ್ತಮಗೊಳಿಸಿತ್ತು.
ಮುಂದಿನ ಎರಡು ವರುಷಗಳು ಯೋಚನೆಯಿಲ್ಲದೇ ಸಾಗಿದವು. ಮೂರನೇ ವರುಷದ ಭೇಟಿಯ ಸಂದರ್ಭದಲ್ಲಿ ನನ್ನ ಜ್ಞಾನದಂತ ತುಸು ತೊಂದರೆ ನೀಡುತ್ತಿತ್ತು. ಅದೇ ತಾನೆ ಚರ್ಮ ಸೀಳಿ ಹೊರಬರುವ ಪ್ರಯತ್ನದಲ್ಲಿದ್ದ ಜ್ಞಾನದಂತ ಭಾರೀ ನೋವನ್ನೇ ನೀಡಿತ್ತು. "ದಂತವೈದ್ಯ ಕಾಲೇಜಿಗೇ ಭೇಟಿ ನೀಡು, ಒಳ್ಳೇ ಟೈಮ್ ಪಾಸ್" ಎಂದು ಸಲಹೆ ನೀಡಿದ್ದ ಸ್ನೇಹಿತರನ್ನು ಧಿಕ್ಕರಿಸಿ ವೃತ್ತಿಪರ ವೈದ್ಯರ ಅಂಗಡಿಗೆ ದೌಡಾಯಿಸಿದ್ದೆ. ಎಲ್ಲಾ ದಂತವೈದ್ಯರಂತೆ ಇವರ ಹಲ್ಲೂ ಬೆಳ್ಳಗಿತ್ತು. ಪ್ರತೀ ವೃತ್ತಿಗೂ ಒಂದು ಕೊರತೆ ಇದ್ದೇ ಇರುತ್ತದಲ್ಲವೇ? ಗಿರಾಕಿಗಳಿಗೆ ಕೊಲ್ಗೇಟ್ ನಗೆ ಬೀರುವ ಅನಿವಾರ್ಯತೆಯಿಂದ ಪಾನ್ ಮಸಾಲಾ, ಗುಟ್ಕಾದಂತ ರುಚಿಕರ ವಸ್ತುಗಳನ್ನು ಅಗಿಯುವ ಬಯಕೆಯನ್ನು ಅವರು ಅದುಮಿಟ್ಟುಕೊಳ್ಳಬೇಕಾಗುತ್ತದಲ್ಲ, ಎಂದು ನನಗೆ ಕನಿಕರವೆನಿಸಿತು. "ಜ್ಞಾನದಂತದಿಂದ ಪ್ರಯೋಜನವೇನೂ ಇಲ್ಲ, ಅದನ್ನು ಕೀಳೋಣ " ಎಂದ ಅವರ ಸಲಹೆ ನನಗೆ ರುಚಿಸಲಿಲ್ಲ. ಅದೇ ತಾನೇ ಕಾಲೇಜು ಮುಗಿಸಿದ್ದ ಅವರು ಇನ್ನೂ ಎಳಸು ಎಂದು ಅಭಿಪ್ರಾಯಿಸಿ "ಆಯಿತು ಅತೀ ಶೀಘ್ರ್‍ಅ ಭೇಟಿ ಗೊತ್ತುಪಡಿಸುತ್ತೇನೆ" ಎಂದು ಸುಳ್ಳು ಹೇಳಿ ಅಲ್ಲಿಂದ ಕಾಲ್ಕಿತ್ತೆ. ಅದೇ ನನ್ನ ಕೊನೆಯ ಭೇಟಿಯಾಯಿತು.
ಕೆಲ ವರುಷಗಳ ಹಿಂದೆ ವೃತ್ತಿ ಅರಸುತ್ತ ಬೆಂಗಳೂರಿಗೆ ವರ್ಗಾವಣೆಯಾಗಿದ್ದ ನಾನು ಮೊದಲು ಮಾಡಿದ ಕೆಲಸಗಳಲ್ಲೊಂದು, ದಂತ ವೈದ್ಯರನ್ನು ಹುಡುಕಿದ್ದು. ಅವರ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ಕೇಳಿದ್ದ ನಾನು ಶೀಘ್ರದಲ್ಲೇ ಒಂದು ಭೇಟಿಯನ್ನು ಗೊತ್ತುಪಡಿಸಿದೆ. ಅವರ ಶೈಕ್ಷಣಿಕ ಸಾಧನೆಯ ಬಗ್ಗೆ ಕುತೂಹಲಿಯಾಗಿದ್ದ ನಾನು, ಸರ್ಕಾರಿ ದಂತವೈದ್ಯ ಕಾಲೇಜು, ಬೆಂಗಳೂರಿನ ಸ್ವರ್‍ಣ ಪದಕ ವಿಜೇತ ವೈದ್ಯರು ಎಂದು ತಿಳಿದಾಗ ಪರವಾಗಿಲ್ಲ ಎಂ ಬಿ ಬಿ ಎಸ್ ಸೀಟು ಮಿಸ್ ಆದವರಲ್ಲಿ ಉನ್ನತ ಶ್ರ್‍ಏಣಿಯ ವಿದ್ಯಾರ್ಥಿ ಎಂದು ಕಟಕಿಯಾಡಿದ್ದೆ. ಆದರೆ ಭೇಟಿಯ ಸಂದರ್ಭದಲ್ಲಿ ನನಗೊಂದು ಆಘಾತ ಕಾದಿತ್ತು. ಬಲಭಾಗದ ಮೇಲ್ಪಂಕ್ತಿಯ ಸಾಲಿನ ಮೂರನೇ ಹಲ್ಲು ಹುಳುಕು ಹಿಡಿಯುವ ಹಾದಿಯಲ್ಲಿದೆ ಎಂದು ವೈದ್ಯರು ಬಹಿರಂಗ ಪಡಿಸಿದರು. "ಅದನ್ನು ಸ್ವಚ್ಛಪಡಿಸಿ ಟೋಪಿ ತೊಡಿಸುವ" ಎಂದು ಸಲಹೆ ನೀಡಿದರು. ಹಲ್ಲಿನ ಟೋಪಿಯದೂ ಕಾಸಿಗೆ ತಕ್ಕ ಕಜ್ಜಾಯದ ವ್ಯವಹಾರ.
ಉಳ್ಳವರು ಬಂಗಾರದ ಟೋಪಿ ತೊಡಿಸುವರು
ಮುರುಕು ಹಲ್ಲಿಗೆ, ನಾನೇನ ಮಾಡಲಿ ಬಡವನಯ್ಯ ||
ಎಂದು ಯೋಚಿಸಿದರೂ, ಬಾಳಿಕೆಯ ದೃಷ್ಟಿಯಿಂದ ಬೆಳ್ಳಿಯ ಟೋಪಿಯನ್ನೇ ಆಯ್ಕೆ ಮಾಡಿದೆ. ಇನ್ನು ಟೋಪಿ ತೊಡಿಸುವ ಕಾರ್ಯವಾದರೂ ಅತಿ ಸುಲಭವೇನಲ್ಲ. ಸರಿಯಾದ ಅಳತೆ ನೀಡಿ, ವಾರವೊಂದರ ನಂತರದ ದಿನವೊಂದನ್ನು ಗೊತ್ತುಪಡಿಸಿದರು. ಈ ಬಾಯಿಯೂ ಒಂದು ವಿಚಿತ್ರ ಅಂಗ. ದಂತವೈದ್ಯಾಲಯದಲ್ಲಿ ಕುರ್ಚಿಯ ಮೇಲೆ ಪವಡಿಸಿ, ಬಾಯಿ ಅಗಲಿಸುವ ಯಂತ್ರ ಧರಿಸಿದೊಡನೇ ಜೊಲ್ಲು ಹರಿಯಲು ಶುರುವಾಗುತ್ತದೆ. ವೈದ್ಯರ ಸಲಕರಣೆಗಳ ಪರಿಣಾಮವೋ ಅಥವಾ ಸಹಾಯಕ ನರ್ಸ್ ಕಾರಣವೋ ನಿರ್ಧರಿಸುವುದು ಕಷ್ಟ. ಸ್ವಚ್ಛಗೊಳಿಸುವ ನಳಿಕೆ, ಸಕಲ ಸಲಕರಣೆಗಳೊಂದಿಗೆ ಸನ್ನದ್ಧರಾದ ವೈದ್ಯರು ಹಲ್ಲಿಗೆ ಟೋಪಿ ಅಳವಡಿಸಿದರು. ಅದರ ಮುಂದಿನ ಹಂತ ದಂತಟೋಪಿಯನ್ನು ಅದರ ಸ್ಥಾನದಲ್ಲಿ ಪಲ್ಲಟಗೊಳ್ಳದಂತೆ ಕೂರಿಸುವುದು. ಇನ್ನೇನು ಸುತ್ತಿಗೆಯಲ್ಲಿ ಬಡಿಯಬಹುದು ಎಂದುಕೊಂಡಿದ್ದ ನನಗೆ ವೈದ್ಯರು ಮರದ ಆಯತಾಕಾರದ ಚೂರೊಂದನ್ನು ತಂದಾಗ ಆಶ್ಚರ್ಯ. ಅದನ್ನು ಬಾಯಲ್ಲಿರಿಸಿ "ಗಟ್ಟಿಯಾಗಿ ಅಗಿಯಿರಿ" ಎಂದರು. ಅಂದು ಅಳವಡಿಸಿದ ದಂತಟೋಪಿ ಐದು ವರುಷಗಳ ನಂತರವೂ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದೆ. ವಿದೇಶೀ ಸಲಕರಣೆಗಳೊಂದಿಗೆ ದೇಶೀ ಮರದ ಚೂರನ್ನು ದಂತವೈದ್ಯಾಯುಧ ಬತ್ತಳಿಕೆಯಲ್ಲಿರಿಸಿಕೊಂಡ ವೈದ್ಯರು ನನ್ನ ಅಭಿಪ್ರಾಯವನ್ನು ಗಣನೀಯವಾಗಿ ಬದಲಿಸಿದ್ದರು.
ವೃತ್ತಿಸಂಬಂಧ ಅಮೇರಿಕಾಕ್ಕೆ ಬಂದ ಮೇಲೂ ದಂತವೈದ್ಯರ ಭೇಟಿಯನ್ನು ಮುಂದುವರೆಸಿದ್ದೆ. ಕಳೆದ ತಿಂಗಳು ಬಲಭಾಗದ ಜ್ಞಾನದಂತ ನೋವಲು ಆರಂಭಿಸಿತು. ಮೇಲಿನ ಪಂಕ್ತಿಯೋ, ಕೆಳಗಿನ ಪಂಕ್ತಿಯೋ ಎಂದು ನಿರ್ಧರಿಸಲಾಗದಷ್ಟು ನೋವು. ಈ ಬಾರಿ ಬಿಳಿಹಲ್ಲಿನ ಬಿಳಿವೈದ್ಯರು ನನ್ನ ದಂತ ಪರೀಕ್ಷೆ ಮಾಡಿ "ನೋಡಿ, ಈ ಜ್ಞಾನದಂತದಿಂದ ಪ್ರಯೋಜನವೇನೂ ಇಲ್ಲ, ಅದನ್ನ ಕೀಳುವ" ಎಂದು ಅಭಿಪ್ರಾಯಪಟ್ಟರು. ಇದೇ ಅಭಿಪ್ರಾಯವನ್ನು ಹಿಂದೆ ಧಿಕ್ಕರಿಸಿದ್ದರೂ ಇಂದಿನ ಪರಿಸ್ಥಿತಿ ಭಿನ್ನವಾಗಿತ್ತು. ಜೀವ ಕೀಳುವ ನೋವಿನಿಂದ ದಂತವೈದ್ಯೋ ನಾರಾಯಣೋ ಹರಿ: ಎಂದು ನಮಿಸಿದೆ.

- ಕನ್ನಡಿಗ

ಇರದವರ ನಡುವೆ ಉಳ್ಳವನಾಗಬೇಡ..!

ಬೆಳಿಗ್ಗೆ ಒಂಬತ್ತೂವರೆಗೆ ಆಫ಼ೀಸಿಗೆ ತಡವಾಗಿ ಮೆಜೆಸ್ಟಿಕ್‍ನಲ್ಲಿ ಬಸ್ಸಿಗೆ ಕಾಯ್ತಾ ಇರೋರನ್ನ, ಎಮರ್ಜೆನ್ಸಿಲ್ಲಿರೋ ರೋಗಿಗಳನ್ನ ಕರ್ಕೊಂಡು ಹೋಗ್ತಾ ಟ್ರಾಫ಼ಿಕ್‍ನಲ್ಲಿ ಸಿಕ್ಕಾಕ್ಕೊಂಡು ಅಂಬುಲೆನ್ಸಲ್ಲಿ ಕೂತಿರೋ ಪೇಶಂಟ್ ಕಡೆಯವರ್ನಾ ಒಮ್ಮೆ ಕೇಳಿ ನೋಡಿ "ಈ ಕಾವೇರಿ ಚಳುವಳಿಗೆ ಒಳ್ಳೇ ಸಹಕಾರ ಕೊಡ್ತಾ ಇದೀರಾ" ಅಂತ. ಕನ್ನಡದಲ್ಲಿ ಇರೋ ಕೆಟ್ಟ ಶಬ್ದಾನೆಲ್ಲಾ ಉಪಯೋಗಿಸಿ ಉಗೀತಾರೆ. ಯಾವುದೇ ಚಳುವಳಿ ಜನ ಬೆಂಬಲ ಇಲ್ದೇ ಮಹತ್ವ ಕಳಕೊಳ್ಳೋದೆ ಹೀಗೆ.
ಬಸ್ಸು ಸುಟ್ಟು, ಲೂಟಿ ಮಾಡಿದ್ರೆ ಸರ್ಕಾರ ಕಾವೇರಿ ನೀರು ಕೊಡತ್ತಾ, ಲಾಠಿ ಚಾರ್ಜ್ ಮಾಡತ್ತಾ? ಜನತಾದಳ ಇರಲಿ, ಸಮ್ಮಿಶ್ರ ಇರಲಿ ಅಥವಾ ಕಾಂಗ್ರೆಸ್ ಇರಲಿ, ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡೋ ಜವಾಬ್ದಾರಿ ಇದೆ. ಅದರ ಇತಿಮಿತಿಯಲ್ಲಿ ಕಾರ್ಯ ನಡೆಸುವುದು ಅನಿವಾರ್ಯ ಕೂಡಾ.
ಇದೇ ಮಾತನ್ನ ಐದುವರೆ ಕೋಟಿ ಕನ್ನಡಿಗರು ಹೇಳಿದರೆ ಅದಕ್ಕೆ ಬೇರೇ ಅರ್ಥ; ಇನ್ಫ಼ೊಸಿಸ್ ನಾರಾಯಣಮೂರ್ತಿ ಹೇಳಿದ್ರೆ ಇನ್ನೊಂದು ಅರ್ಥ. ಕನ್ನಡ ಮಾಧ್ಯಮ ವರದಿಗಾರರಿಗೆ ಮೂರ್ತಿಯವರನ್ನ ಕೆಣಕೋದು, ಏನಾದ್ರೂ ವಿವಾದಾತ್ಮಕ ಘಟನೆ ಬಗ್ಗೆ ಮಾತಾಡಿದ್ರೆ ಅದನ್ನ ತಿರುಚೋದು, ಇವೆರಡೇ ಕೆಲಸ ಅಂತ ಅನಿಸ್ತದೆ. ರವಿ ಬೆಳಗೆರೆಯಂತೂ ಪ್ರತಿ ವಾರ ಕೆಲ ಪುಟಗಳನ್ನ ನಾರಯಣಮೂರ್ತಿಯವರಿಗೇ ಮೀಸಲಿಟ್ಟ ಹಾಗಿದೆ. ಆಶ್ಚರ್ಯದ ಸಂಗತಿಯೆಂದರೆ, ನಾವ್ಯಾರೂ ಅಥವಾ ಇನ್ಯಾರೂ ರವಿ ಬೆಳಗೆರೆ ಬೆಂಜ಼್ ಕಾರಲ್ಲಿ ತಿರುಗಾಡುವುದರ ಬಗ್ಗೆ, ಅಥವಾ ಅವರ ಪತ್ರಿಕೆ ತೆರಿಗೆ ಸವಲತ್ತು ಉಪಯೋಗಿಸಿಕೊಂಡಿದ್ದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ರವಿ ಬೆಳಗೆರೆ ಅಂತಲ್ಲ, ಇದು ಇತರೆ ತೆಗಳುವ ಪತ್ರಿಕೋದ್ಯಮಿಗಳ ಸಂಕುಲಕ್ಕೂ ಅನ್ವಯವಾಗುತ್ತದೆ. ಅವರಿಗೆ ತೆಗಳಲು ಅವಕಾಶ ಮಾಡಿಕೊಟ್ಟು ಪತ್ರಿಕೆ ಪ್ರಸಾರಕ್ಕೆ ಸಹಕರಿಸಿದ್ದಕ್ಕಾದರೂ ಮೂರ್ತಿಗಳಿಗೆ ಇವರು ಕೃತಜ್ನರಾಗಿರಬೇಡವೆ ಅಂತ ಕೇಳುವುದು ಕುಚೋದ್ಯವಾಗಬಹುದು.
ಮೂರ್ತಿಗಳು ಏನು ಮಾಡಿದಾರೆ ಅಥವಾ ಏನು ಮಾಡಿಲ್ಲ ಅನ್ನೋ ಮಾತು ಬಿಡಿ, ಅದು ಅವರ ವೈಯಕ್ತಿಕ ವಿಷಯ. ಕಷ್ಟದಲ್ಲಿದ್ದವರಿಗೆ ನೆರವಾಗುವುದು, ಸಮಾಜಕ್ಕೆ ಹೋರಾಟ ನಡೆಸುವುದು ಇವೆಲ್ಲಾ ಶ್ರೀಮಂತರಿಂದ ಮಾತ್ರ ಸಾಧ್ಯ ಅನ್ನುವುದೂ ಸುಳ್ಳು. ಅದು ವ್ಯಕ್ತಿಯ ಇಷ್ಟಾನಿಷ್ಟಕ್ಕೆ ಬಿಟ್ಟಿದ್ದು; ಆದರೆ ಅದೇ ಕಾರಣಕ್ಕೆ ಆ ವ್ಯಕ್ತಿಯನ್ನು ಪ್ರತಿದಿನ ಕೆಣಕಿ, ಮಾಧ್ಯಮದ ಮೂಲಕ ಉಸಿರುಕಟ್ಟಿಸುವುದು ಖಂಡಿತಾ ಸರಿಯಲ್ಲ. ಪ್ರಚೋದನಾತ್ಮಕ ಬರಹಗಳು ಅರಿಯದ ಮನವನ್ನು ಕೆಡಿಸುವುದು ಸುಳ್ಳಲ್ಲ. ರಾಜ್ಯಕ್ಕಾಗುವ ಲಾಭ ನಷ್ಟದ ಮಾತು ಹಾಗಿರಲಿ, ನಮ್ಮೆಲ್ಲರ ನಡುವೆ ನಿತ್ಯ ನಡೆದಾಡುವ ನಾರಾಯಣಮೂರ್ತಿ, ಪ್ರೇಂಜೀ ಮುಂತಾದವರನ್ನ ಸಮಾಜದ ಅನಾಗ್ರಹಕ್ಕೆ ತುತ್ತಾಗುವಂತೆ ಮಾಡುವುದು ಖಂಡಿತಾ ಸರಿಯಲ್ಲ.
ಐಟಿ ಉದ್ಯಮಿಗಳು ಬಂಡವಾಳಶಾಹಿಗಳು, ಸಮಾಜ ಕಂಟಕರು ಎಂದೆಲ್ಲಾ ಬಿಂಬಿಸುವ ಮಾಧ್ಯಮಗಳು ನಮ್ಮದೇ ಟಾಟಾ, ಬಿರ್ಲಾ, ಅಂಬಾನಿ ಉದ್ಯಮ ಸಮೂಹ ಹೊರದೇಶಗಳಲ್ಲಿ ಕಂಪೆನಿಗಳನ್ನು ಖರೀದಿಸಿದರೆ ಹೊಗಳುತ್ತವೆ. ಬಂಡವಾಳವಿಲ್ಲದೇ ಖರೀದಿ ಹೇಗೆ ಸಾಧ್ಯವಾಯಿತು ಎಂದು ಯೋಚಿಸುವುದಿಲ್ಲವೇ? ನಮ್ಮಲ್ಲಿ ವರ್ಣಬೇಧವಿಲ್ಲದಿದ್ದರೂ, ವರ್ಗಬೇಧವಿದೆ ಎನ್ನಬಹುದೇ? ಇಂದಿನ ಐಟಿ ಉದ್ಯಮಿಗಳಲ್ಲಿ ಹೆಚ್ಚಿನವರು ಮಧ್ಯಮವರ್ಗ ಮೂಲದಿಂದ ಬಂದು, ಉನ್ನತವರ್ಗಕ್ಕೆ ಜಿಗಿದವರು. ಯಾವುದೇ ಜಿಗಿತಕ್ಕೆ ಶಕ್ತಿಯ ಅವಶ್ಯಕತೆಯಿದೆ; ತೊಂಬತ್ತರ ದಶಕದಲ್ಲಿ ಉತ್ಪನ್ನವಾದ ಆರ್ಥಿಕ ನೀತಿಯನ್ನೇ ಚಿಮ್ಮು ಹಲಗೆಯಾಗಿ ಉಪಯೋಗಿಸಿ ಮಧ್ಯಮವರ್ಗದಿಂದ ಉನ್ನತವರ್ಗಕ್ಕೆ ಜಿಗಿದವರು ಇವರು. ಸರಿ, ನಮಗೆ ಅವರಂತೆ ಜಿಗಿಯಲು ಸಾಧ್ಯವಿದ್ದರೆ ಜಿಗಿಯಬೇಕು, ಇಲ್ಲವಾದರೆ, ಆರಾಮಾಗಿರಬೇಕು. ಅದನ್ನ ಬಿಟ್ಟು ಅವರ ಪ್ರತಿ ಚಲನವಲನಗಳನ್ನು ಮಾಧ್ಯಮದ ಮೂಲಕ ತೆಗಳಿ ಈರ್ಶ್ಯೆ ತೀರಿಸಿಕೊಳ್ಳುವವರನ್ನು ಯಾವುದರಲ್ಲಿ ಹೊಡೆಯಬೇಕು?

- ಕನ್ನಡಿಗ

ವಿದ್ಯಾರಣ್ಯಪುರಂನಲ್ಲಿನ ಆಪೋಲೋ ಜಿಮ್

ಎಲ್ಲಾ ಊರಲ್ಲೂ "ವಿದ್ಯಾರಣ್ಯಪುರ" ಅಂತ ಗಲ್ಲಿ ಇರತ್ತೆ, ಆದ್ರೆ ಮೈಸೂರಲ್ಲಿರೋ ವಿದ್ಯಾರಣ್ಯಪುರ ನನ್ನ ಮಟ್ಟಿಗೆ ಒಂಥರಾ ಸ್ಪೆಷಲ್. ನಾನು ಕಾಲೇಜ್ ಓದುವಾಗ ನಾಲ್ಕು ವರ್ಷ ಅಲ್ಲೇ ಇದ್ದೆ. ವಿದ್ಯಾರಣ್ಯಪುರಕ್ಕೆ ಒಂದು ಐತಿಹಾಸಿಕ ಖದರ್ರು ಬಂದಿದ್ದು ನಾಲ್ಕನೇ ಮೇನ್, ನಾಲ್ಕನೇ ಕ್ರಾಸಲ್ಲಿ ಇರೋ "ಅಪೋಲೊ ಜಿಮ್"ನಿಂದ ಅನ್ನಬಹುದು. ಒಂಥರಾ ಗರಡಿಮನೆ ಇದ್ದಂಗೆ ಇದ್ದ ಆ ಜಿಮ್ ಈಗಿನ ಕಾಲದ ಜಿಮ್‍ಗಳಂತೆ ಮಲ್ಟಿಜಿಮ್ ಆಗಿರಲಿಲ್ಲ. ಅದೇ ರೋಡಲ್ಲಿ ಇದ್ದ, ಚಿಲುಮೆಯ ಉದ್ಯಾನವನದ ಒಂದು ಮೂಲೆಯಲ್ಲಿ ಕಾರ್ನರ್ ಸೈಟಲ್ಲಿ ಹಳೇ ಮನೆಗೆ ತಗಡಿನ ಬೋರ್‍ಡ್ ತೂಗಿ ಅದರ ಮೇಲೆ "ಅಪೊಲೊ ಜಿಮ್" ಅಂತ ಬರೆದಿದ್ದರು. ಜಿಮ್ಮು ಹಳೇದಿರಬಹುದು ಆದ್ರೆ ಅದು ಮುದುಕರ ಜಿಮ್ ಅಂತೂ ಆಗಿರಲಿಲ್ಲ. ತಿಂಗಳಿನ ಸದಸ್ಯತ್ವಕ್ಕೆ ಬರೀ ಇಪ್ಪತ್ತು ರುಪಾಯಿ, ಊರಿಂದ ಅಪ್ಪ ಕಳಿಸಿದ ದುಡ್ಡಲ್ಲಿ ಈ ಜಿಮ್ಮಿಗೆ ಬರೋಕಂತು ಕಷ್ಟ ಆಗ್ತಿರಲಿಲ್ಲ. ಹತ್ರದ ಮಾಧ್ವ ಹಾಸ್ಟೆಲು, ಸಂಕೇತಿ ಹಾಸ್ಟೆಲು ಹುಡುಗರಲ್ಲದೇ, ಚಾಮುಂಡಿಪುರಮ್, ಜೆ ಪಿ ನಗರದ ಹುಡುಗರೂ ಬರ್ತಾ ಇದ್ರು. ಎಲ್ಲಾ ಚಿಗುರು ಮೀಸೆ ಹುಡುಗ್ರೆ. ಅಷ್ಟೇ ಅಲ್ಲ, ಜಾತಿ ಪಾಡೂ ಈ ಜಿಮ್ಮಿಗೆ ಇರಲಿಲ್ಲ, ಜನಿವಾರದೋರು, ನಾಮದೋರು, ಎಲ್ಲಾ ಜಾತಿ ಹುಡುಗ್ರು ಬರ್ತಾ ಇದ್ರು.
ಜೀರ್ಣಾವಸ್ಥೆಯಲ್ಲಿದ್ದ ಬಾಗಿಲು ದಾಟಿ ಒಳಗೆ ಕಾಲಿಟ್ಟರೆ, ಒಂದು ದೊಡ್ಡ ಹಾಲ್. ಅಲ್ಲಿ ಗೋಡೆಗೆ ಆನಿಸಿದಂತೆ ಸುತ್ತಲೂ ಶೆಲ್ಫ್ ಇಟ್ಟಿದ್ದರು. ಶೆಲ್ಫ್ ತುಂಬಾ ಏರಿಕೆ ಕ್ರಮದಲ್ಲಿ ಹಳೇ ಕಾಲದ ಡಂಬೆಲ್ಸ್ ಇಟ್ಟಿದ್ರು. ಹಾಗೇ ಒಂದು ಮೂಲೇಲಿ ನಿಲುವು ಕನ್ನಡಿ ಕೂಡಾ ಇತ್ತು. ಹಾಲಲ್ಲಿ ಹಾಗೇ ಮುಂದೆ ನಡೆದರೆ, ಎಡ ಭಾಗದ ಗೋಡೆಯ ಮಧ್ಯೆ ಒಂದು ಬಾಗಿಲು ಇತ್ತು. ಅದನ್ನ ದಾಟಿದ್ರೆ ಮಾಡಿಲ್ಲದ ಒಂದು ಕೋಣೆ ಇತ್ತು. ಆಗೆಲ್ಲಾ ಸುತ್ತಲೂ ಅಷ್ಟೊಂದು ಮಹಡಿ ಮನೆಗಳು ಇಲ್ಲದೇ ಇದ್ದಿದ್ರಿಂದ ಮೇಲೆ ಸೂರು ಇಲ್ಲದೇ ಇದ್ರೂ ತೊಂದರೆ ಇರಲಿಲ್ಲ. ಮೇಲೆ ಸೂರೇ ಇಲ್ದೇ ಇದ್ರೂ ಅದರ ಒಂದು ಪಾರ್ಶ್ವದ ಗೋಡೆಗೆ ಕಿಟಕಿ ಇತ್ತು. ಆ ಕಿಟಕಿ ನೋಡಿದಾಗಲೆಲ್ಲ, ನಂಗೆ ಅನಿಸ್ತ ಇತ್ತು. "ಮನೆಗೆ ಹಂಚೇ ಇಲ್ದೆ ಇದ್ರೆ, ಕಿಟಕಿ ಯಾಕೆ?" ನಾವು ಹುಡುಗ್ರು ಈ ಕಿಟಕಿ ಬಗ್ಗೆ ಮಾತಾಡಿಕೊಂಡ್ರೂ, ಜಿಮ್ ಗುರುಗಳ ಹತ್ರ ಕೇಳಿರ್ಲಿಲ್ಲ. ತುಂಬಾ ಸ್ಟ್ರಿಕ್ಟ್ ಟೀಚರ್ ಅವರು; "ಕರ್ನಾಟಕ ರತ್ನ", "ಮೈಸೂರು ಕೇಸರಿ" ಹೀಗೇ ಪ್ರಶಸ್ತಿ ಗೆದ್ದಿದ್ರಂತೆ. ನಂಗೆ ದೇಹದಾರ್ಢ್ಯದಲ್ಲಿ ಅಂಥಾ ಆಸಕ್ತಿ ಏನೂ ಇರಲಿಲ್ಲ. ತುಂಬಾ ಸೋಮಾರಿ ಬೇರೆ; ಆದ್ರೆ ನನ್ನ ಹಾಸ್ಟೆಲ್ ಮೇಟ್ಸ್ ಜೊತೆ ಜಿಮ್ಮಲ್ಲಿ ಒಳ್ಳೇ ಮಜಾ ಬರ್ತಾ ಇತ್ತು. ಪ್ರತಿದಿನಾನೂ ಒಂದೊಂದು ಸನ್ನಿವೇಶಗಳು, ದಿನಾನೂ ಒಬ್ರು ಬಕ್ರಾ ಆಗೇ ಆಗ್ತಾ ಇದ್ರು. ಇದಕ್ಕಿಂತಾ ಹೆಚ್ಚಾಗಿ, ಕಸರತ್ತು ಮುಗಿಸಿದ ಮೇಲೆ, ನಾವೆಲ್ಲಾ ಒಟ್ಟಿಗೆ ಹೋಗಿ ಜಿ ಟಿ ಆರ್ (ಗಾಯತ್ರಿ ಟಿಫನ್ ರೂಮ್) ಅಲ್ಲಿ ಕೂರ್ತಾ ಇದ್ವಿ. ಅದನ್ನಂತೂ ಮಿಸ್ ಮಾಡ್ಕೋತಾನೆ ಇರ್ಲಿಲ್ಲ. ಅದರ ಬಗ್ಗೆ ಮತ್ತೆ ಯಾವಗಲಾದ್ರೂ ಬರೀತಿನಿ.
ಜಿಮ್ಮಿಗೆ ಬರೋ ಹುಡುಗ್ರಲ್ಲಿ ಹೆಚ್ಚಿನವರಿಗೆ ಎದೆ, ಭುಜ ಮಾಂಸಖಂಡದ ಮೇಲೆ ಖಯಾಲಿ ಜಾಸ್ತಿ ಇರತ್ತೆ. ಅದಕ್ಕೆ ಬಸ್ಕಿ ಹಾಕೋದು, ಹೆವಿ ಡಂಬೆಲ್ಸ್ ಎತ್ತೋದು ಜಾಸ್ತಿ. ಹೇಗಾದ್ರೂ ಮಾಡಿ ಭಾರ ಎತ್ತೋ ಹುಮ್ಮಸ್ಸು. ಅದಕ್ಕೇ ಹಲ್ಲುಮಿಡಿ ಕಚ್ಚಿ ಎತ್ತಾ ಇದ್ರು. ಮೂತಿ ಪೂರಾ ಉಬ್ಬಿಸಿ ಹನುಮಂತನ ಥರಾ ಆಗ್ತಾ ಇದ್ದ ಅವ್ರನ್ನ ನೋಡಿದ ಕೂಡ್ಲೇ ನಮ್ಮ ಗುರುಗಳು ಕೈಲಾಸಂ ಅವರ ಈ ಜೋಕ್ ಹೇಳ್ತಾ ಇದ್ರು. "ಅಲ್ಲ ಕಣ್ರೋ, ನಿಮ್ಮ ಬಾಡಿ ಹನುಮಂತನ ಬಾಡಿ ಥರಾ ಅಗ್ಬೇಕು, ಮೂತಿ ಅಲ್ಲಾ. ಅದ್ಯಾಕೆ ಹಾಗೆ ಮೂತಿ ಕಿವುಚ್ತೀರಾ?" ಅಂತ.
ಆ ಜಿಮ್ ಈಗ್ಲೂ ಇದ್ಯೋ ಇಲ್ವೋ ಗೊತ್ತಿಲ್ಲ. ಚಾಮುಂಡಿ ಬೆಟ್ಟಕ್ಕೆ ಹತ್ರ ಇದ್ದ ವಿದ್ಯಾರಣ್ಯಪುರಂಗೆ ಒಂದು ಕಳೆ ಬಂದಿದ್ದೆ, ಈ ಜಿಮ್ಮಿಂದಾ ಅಂತಾ ನಂಗೆ ಅನಿಸ್ತಾ ಇತ್ತು.

- ಕನ್ನಡಿಗ

ಭಾಷಾಧಾರಿತ ಮೀಸಲಾತಿ - ಒಂದು ಚಿಂತನೆ

ಇನ್ಫೋಸಿಸ್ ನಾರಾಯಣಮೂರ್ತಿಯವರನ್ನು ಕನ್ನಡಿಗರು ಬೈದುಕೊಂಡರೆ ಅದಕ್ಕೆ ಕಾರಣವೊಂದಿದೆ - ಅವರು ಇನ್ಫೋಸಿಸ್‌ನಲ್ಲಿ ಕನ್ನಡಿಗರಿಗೆ ಮೀಸಲಾತಿ ಅಳವಡಿಸಲಿಲ್ಲ. ಇದರ ಬಗ್ಗೆ ಸಾಕಷ್ಟು ಕಟುಟೀಕೆ, ವಿಮರ್ಶೆ ಹಾಗೂ ಲೇಖನಗಳು ಈಗಾಗಲೆ ಸರ್ವ ಮಾಧ್ಯಮಗಳಲ್ಲೂ ಬಂದಿವೆ. ಇದರಲ್ಲಿ ನನಗೆ ಅರ್ಥವಾಗದ ವಿಷಯವೊಂದಿದೆ - ಮೀಸಲಿಗೆ ಅರ್ಹ ಕನ್ನಡಿಗರು ಎಂದರೆ ಯಾರು?

೧. ಕನ್ನಡ ಮಾತೃಭಾಷೆಯಾಗಿದ್ದು ಅಂತೆಯೇ ಮಾತನಾಡಲು ಅರಿತವರು
೨. ಕನ್ನಡ ಮಾಧ್ಯಮದಲ್ಲಿ ಓದಿ ನಂತರ ಆಂಗ್ಲ ಮಾಧ್ಯಮದಲ್ಲಿ ಉನ್ನತ ಶಿಕ್ಷಣ ಪಡೆದವರು. ಈ ಗುಂಪಿನಲ್ಲಿ ಕನ್ನಡ ಮಾತೃಭಾಷಿಕರಲ್ಲದವರನ್ನೂ ಸೇರಿಸಿದ್ದೇನೆ. ಉದಾ: ತುಳು, ಕೊಡವ, ಕೊಂಕಣಿ ಭಾಷಿಕರು.
೩. ಕನ್ನಡ ಭಾಷಿಕ ಪಾಲಕರಿದ್ದು, ಕನ್ನಡ ಗಂಧಗಾಳಿ ಇರದವರು. ಇವರನ್ನು ಕನ್ನಡವನ್ನು ಪಿತ್ರಾರ್ಜಿತವಾಗಿ ಪಡೆದವರ ಗುಂಪಿನಲ್ಲಿ ಸೇರಿಸೋಣ.

ಸಮಸ್ಯೆ ಕ್ಲಿಷ್ಟವಾಗುವುದು ಇಲ್ಲೇ. ಮೊದಲನೇ ಗುಂಪಿನವರಿಗೆ ಮೀಸಲು ನೀಡೋಣವೆಂದರೆ, ಅವರಲ್ಲಿ ಹೆಚ್ಚಿನವರು ಕಾನ್ವೆಂಟ್‌ಗಳಲ್ಲಿ ಓದಿ, ಆಂಗ್ಲಮಾತೆಗೆ ಸೇವೆ ಸಲ್ಲಿಸಿದವರು. ಅವರಿಗಿಂತ ಎರಡನೇ ಗುಂಪಿನವರು ಖಂಡಿತವಾಗಿಯೂ ಮೀಸಲಿಗೆ ಅರ್ಹರು.

ಇನ್ನು ಎರಡನೇ ಗುಂಪಿಗೆ ಬಂದರೆ, ವೃತ್ತಿಸಂಬಂಧ ಊರಿಂದೂರಿಗೆ ಸಾಗುತ್ತ, ಹೊರರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತ ಕನ್ನಡದ ಬಗ್ಗೆ ಅಭಿಮಾನವಿದ್ದರೂ ಮಕ್ಕಳನ್ನು ಕನ್ನಡ ಭಾಷೆಯಲ್ಲಿ ಓದಿಸಲಾಗದ ಪಾಲಕರು ಏನು ಮಾಡಬೇಕು? ಅವರಿಗೆ ಅನ್ಯಾಯವಾದಂತಾಗಲಿಲ್ಲವೇ? ಅಲ್ಲದೇ ಇವರ ಅರ್ಹತೆಯನ್ನು ಸೂಕ್ಷ್ಮವಾಗಿ ಗಮನಿಸಿ. ಇವರಲ್ಲಿ ಹೆಚ್ಚಿನವರು ನಗರೇತರ ಶಾಲೆಗಳಲ್ಲಿ ಓದಿ, ಅನಿವಾರ್ಯತೆಯಿಂದಲೋ ಅಥವಾ ಆಂಗ್ಲ ಶಿಕ್ಷಣದ ಅಭಾವದಿಂದಲೋ ಕನ್ನಡ ಮಾಧ್ಯಮದಲ್ಲಿ ಓದಿರುತ್ತಾರೆ. ಆದರೆ ಅದು ಅಷ್ಟಕ್ಕೇ ಮುಗಿಯಲಿಲ್ಲ, ಇನ್ಫೋಸಿಸ್‌ನ ಇನ್ನೊಂದು ಶಾಖೆ ಚೆನ್ನೈಯಲ್ಲಿದೆ. ಇದೇ ಪದ್ಧತಿಯ ಅನುಸಾರ ಅಲ್ಲಿರುವ ಶಾಖೆಯಲ್ಲಿ ತಮಿಳು ಭಾಷಿಕರಿಗೆ ಒಳ ಮೀಸಲಾತಿ ನೀಡಬೇಕು. ಹಾಗಾದರೆ ಕೋಲಕತ್ತಾ, ಪೂನಾ, ಮುಂಬೈ, ಗುಡಗಾಂವ್ ಶಾಖೆಗಳ ಕಥೆ ಏನು? ಒಟ್ಟಿನಲ್ಲಿ, ಈ ಗುಂಪಿನ ಕನ್ನಡಿಗರು ಮೀಸಲಿಗೆ ಹೆಚ್ಚಿನ ಅರ್ಹತೆ ಹೊಂದಿದ್ದಾರೆ ಎಂದುಕೊಂಡರೂ, ಅದಕ್ಕೆ ಪಾಲಕರ ಭಾಷಾಭಿಮಾನ ಕಾರಣವೋ ಅಥವಾ ಅನಿವಾರ್ಯತೆಯೋ ಎಂದು ಪತ್ತೆ ಹಚ್ಚಲು ಯಾವುದೇ ಮಾನದಂಡವಿಲ್ಲ.

ಮೇಲಿನ ಎರಡು ಚರ್ಚೆಯ ಅನುಸಾರ, ಮೂರನೇ ಗುಂಪಿನ ಕನ್ನಡಿಗರನ್ನು ಸಹಜವಾಗಿ ಮೀಸಲಿನಿಂದ ಹೊರತು ಪಡಿಸಬಹುದು.

ಇದೆಲ್ಲಕ್ಕಿಂತ ಹೊರತಾಗಿ ಅವಲೋಕಿಸಿದರೆ, ಇಂಥ ಮೀಸಲಾತಿಯ ಬೇಡಿಕೆಗಳು ಕೊನೆ ಮೊದಲಿಲ್ಲದವು; ಮೊಗೆದಷ್ಟೂ ಮುಗಿಯದ ಸೆಲೆ ಎಂದು ಅನಿಸುತ್ತದೆ. ಇನ್ಫೋಸಿಸ್ ಒಂದೇ ಅಲ್ಲ, ಯಾವುದೇ ಖಾಸಗಿ ಕಂಪೆನಿ ಇಂಥ ಸಾಮಾಜಿಕ ವಿಷಯಗಳಲ್ಲಿ ಗಮನ ಹರಿಸುವಷ್ಟು ಅನುಕೂಲತೆಯಾದರೂ ಎಲ್ಲಿರುತ್ತದೆ. ನನಗೆ ಗೊತ್ತಿರುವ ಒಂದು ಉದಾಹರಣೆ - ಕೇಂದ್ರ ಸರ್ಕಾರ ಪ್ರಾಯೋಜಿತ ಕಾರಖಾನೆಗಳಲ್ಲಿ ಕೆಲವನ್ನು ಹೊರತುಪಡಿಸಿ, ಉತ್ಪಾದಿತ ಮೌಲ್ಯವನ್ನು ಗಮನಿಸಿ. ಒಂದು ಹಂತದಲ್ಲಿ, ಅವುಗಳ ಮೂಲ ಉತ್ಪನ್ನಕ್ಕಿಂತ ಸುಲಭ ದರದ ಕ್ಯಾಂಟೀನ್ ಸೇವೆ, ಬಸ್ ಸೌಕರ್ಯ, ಕಾರ್ಮಿಕ ಸಂಘಟನೆಗಳ ಚುನಾವಣೆ ಇವುಗಳೇ ಪ್ರಮುಖ ವಿಷಯಗಳಾಗಿ ಕಾರ್ಮಿಕರ ಪ್ರತಿ ತಿಂಗಳ ಸಂಬಳಕ್ಕೆ ತೆರಿಗೆದಾರರು ಕಷ್ಟಪಟ್ಟು ಪಾವತಿಸಿದ ಹಣವನ್ನು ಅನುದಾನ ರೂಪದಲ್ಲಿ ಈ ಬಿಳಿಯಾನೆಗಳಿಗೆ ನೀಡಬೇಕಾದ ಪರಿಸ್ಥಿತಿಯಿತ್ತು ಇಂದಿಗೂ ಇದೆ. ಇಂಥ ಲಕ್ಷುರಿ ಖಾಸಗೀ ಕಂಪೆನಿಗಳಿಗೆಲ್ಲಿ?

- ಕನ್ನಡಿಗ

ಕನ್ನಡ ಬಳಕೆಗಿಂತ ಇನ್ನೇನು ಬೇಕು?

ಕವಿ ನಿಸಾರ್ ಅಹಮದ್‌ರ ಅಧ್ಯಕ್ಷತೆಯಲ್ಲಿ ಶಿವಮೊಗ್ಗೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಂದರ್ಭದಲ್ಲೇ ಸಹಜವಾಗೇ ಕನ್ನಡ ಭಾಷೆಯ ಅಳಿವು, ಉಳಿವು, ಉನ್ನತಿ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಜನಜಾಗೃತಿಯ ದೃಷ್ಟಿಯಿಂದ ಸಮ್ಮೇಳನಗಳು ನಿಜಕ್ಕೂ ಸಹಕಾರಿ. ನಮ್ಮ ಸಮ್ಮೇಳನಗಳು ಗಡಿಯಾಚೆಯೂ ಪ್ರಸರಿಸಬೇಕು. ಕಾಸರಗೋಡು, ಬೆಳಗಾವಿ, ಬಳ್ಳಾರಿಗಳಲ್ಲಿ ಕನ್ನಡ ಧ್ವನಿ ಮೊಳಗಬೇಕು. ಆದರೆ, ನಮ್ಮ ಭಾಷೆಯನ್ನು ಉಳಿಸಲು "ಭಾಷಾ ಪೋಲೀಸರು" ಅವಶ್ಯಕವೇ? ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದರೆ, ಭಾಷಾ ಚಳುವಳಿಕಾರರು ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಹೊರತಾಗಿ ಭಾಷಾ ಅಭಿವೃದ್ಧಿ ಸಚಿವಾಲಯ ಹಾಗೂ ಭಾಷಾ ಪೋಲೀಸ್ ಇಲಾಖೆಗಳನ್ನು ಆಗ್ರಹಿಸಿದರೂ ಆಶ್ಚರ್ಯವಿಲ್ಲ. ಅಷ್ಟೇ ಅಲ್ಲ, ಜನರ ತಾಳ್ಮೆಯ ಮಿತಿ ಕೂಡಾ ಮುಂಚಿನಂತಿಲ್ಲವೆನಿಸುತ್ತದೆ, ಒಂದು ಕಿರು ಘಟನೆ ಕೂಡಾ ಗಲಭೆಕಾರಕವಾಗಿ ಮಾರ್ಪಡುತ್ತಿದೆ.

ಇಂಥ ಸಂದರ್ಭದಲ್ಲಿ ನಾವು ಸಂಸ್ಕೃತ ಭಾಷೆಯನ್ನು ಗಮನಿಸಬೇಕು. ವ್ಯಾಕರಣ ಮತ್ತು ರಚನಾತ್ಮಕವಾಗಿ ಜಗತ್ತಿನ ಅತ್ಯಂತ ಉತ್ಕೃಷ್ಟ ಭಾಷೆಯಾಗಿದ್ದರೂ ಜನಸಾಮಾನ್ಯರಿಂದ ಬಳಕೆಯಾಗದೇ ಸಂಸ್ಕೃತ ಅವನತಿ ಹೊಂದಿತು. ಅದರೊಂದಿಗೆ, ಆ ಭಾಷೆಯಲ್ಲಿ ರಚಿತವಾದ ಎಷ್ಟೊಂದು ಕೃತಿಗಳು ಜನರಿಂದ ದೂರವಾಗಿವೆ. ನಾನು ಬಲ್ಲಂತೆ ಆಯುರ್ವೇದ, ಜ್ಯೋತಿಷ್ಯ, ವೇದಗಣಿತ, ಪುರಾತನ ಲೋಹಶಾಸ್ತ್ರ ಮುಂತಾದ ಪ್ರೌಢ ವಿಷಯಗಳ ಬಗ್ಗೆ ಸಂಸ್ಕೃತದಲ್ಲಿ ಸಾಕಷ್ಟು ಅಧ್ಯಯನವಸ್ತು ಮತ್ತು ಆಕರ ಗ್ರಂಥಗಳಿವೆ. ಆದರೆ ಅದನ್ನು ಅಧ್ಯಯಿಸುವ ಹಾಗೂ ಜನಸಾಮಾನ್ಯರಿಗೆ ತಿಳಿಯುವಂತೆ ಅರ್ಥೈಸುವ ಯಾವ ಕೆಲಸಗಳೂ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ನಡೆಸುತ್ತಿವೆ; ಉದಾಹರಣೆಗೆ, ಮೇಲುಕೋಟೆಯಲ್ಲಿನ "ಅಕಾಡೆಮಿ ಆಫ಼್ ಸಂಸ್ಕ್ರತ್ ರಿಸರ್ಚ್". ಅದರ ಲಿಂಕ್ ಇಲ್ಲಿದೆ.

ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಮಧ್ಯವರ್ತಿಗಳಿಲ್ಲದೆ ಸಂಸ್ಕೃತ ಅರ್ಥವಾಗುವುದು ಕಷ್ಟ. ಇಲ್ಲಿ ಸಂಸ್ಕೃತ ಬಲ್ಲವರನ್ನು ಮಧ್ಯವರ್ತಿಗಳು ಎಂಬ ಅರ್ಥದಲ್ಲಿ ಬಳಸಿದ್ದೇನೆ, ಉದಾಹರಣೆಗೆ, ಸರಳವಾಗಿ ದೇವರನ್ನು ಹೊಗಳುವ ಶ್ಲೋಕಗಳು ಕೂಡಾ ಗೂಡಾರ್ಥವುಳ್ಳ ಮಂತ್ರಗಳಾಗಿ ಮಾರ್ಪಟ್ಟು ಅರ್ಥವಾಗದೇ ಇದ್ದರೂ ನಾವು ಪೂಜಾರಿ ಪಠಿಸಿದ್ದಕ್ಕೆಲ್ಲಾ ತಲೆಯಾಡಿಸುತ್ತೇವೆ. ನಮ್ಮ ಹಾಗೂ ದೇವರ ನಡುವೆ ಭಾಷಾಂತರಕಾರರಾಗಿ ಕಾರ್ಯ ನಿರ್ವಹಿಸುವ ಪೂಜಾರಿಗಳು ಮಧ್ಯವರ್ತಿಗಳಲ್ಲವೇ? ಒಟ್ಟಿನಲ್ಲಿ ಸಂಸ್ಕೃತದಂಥ ಸರಳ ಸುಂದರ ಭಾಷೆ ಸಮರ್ಪಕ ಬಳಕೆಯಾಗದೇ ಜನರಿಂದ ದೂರವಾಯಿತಲ್ಲವೇ?

ಕನ್ನಡ ನುಡಿಯಲು ಬಿಗುಮಾನ ಬೇಡ,
ಕನ್ನಡ ಉಳಿಸಲು ಪೋಲೀಸರೂ ಬೇಡ
ಕನ್ನಡ ಬಳಸಿ, ಕನ್ನಡ ಉಳಿಸಿ ||

ಇದೊಂದೇ ನಮ್ಮ ಮಂತ್ರವಾದರೆ ಸಾಕು, ಭಾಷೆ ನೂರುಕಾಲ ಬಾಳುತ್ತದೆ.

- ಕನ್ನಡಿಗ